ತುಮಕೂರಿನ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧ : ಡಿಸಿಎಂ ಡಿ.ಕೆ. ಶಿವಕುಮಾರ್
ಕೆ.ಎನ್.ರಾಜಣ್ಣ ಅವರ 75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮ

ತುಮಕೂರು : "ಬೆಂಗಳೂರಿನಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ ರೂಪಿಸುತ್ತಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
"ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟಲೈಟ್ ಟೌನ್ ಜತೆಗೆ, ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ" ಎಂದರು.
"ನೀವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿ, ನಿಮ್ಮೆಲ್ಲರ ಸೇವೆ ಮುಂದುವರಿಸಲು ಆಶೀರ್ವಾದ ಮಾಡಬೇಕು" ಎಂದು ಮನವಿ ಮಾಡಿದರು.
ರಾಜಣ್ಣ ನೇರ ನುಡಿ ಸ್ವಾಭಿಮಾನದ ನಾಯಕ :
"ಇದು ಐತಿಹಾಸಿಕ ಜನ್ಮದಿನ ಕಾರ್ಯಕ್ರಮ. ನೇರ ನುಡಿ ಸ್ವಾಭಿಮಾನದ ನಾಯಕ ರೈತಾಪಿ ಜನರ ಬದುಕು ಸುಧಾರಣೆಯ ಗುರಿ ಹೊಂದಿರುವ, ಆತ್ಮೀಯ ಸ್ನೇಹಿತನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ರಾಜಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
"ರೈತನಿಗೆ ಲಂಚ, ಬಡ್ತಿ, ನಿವೃತ್ತಿ, ಪಿಂಚಣಿ ಇಲ್ಲ. ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ನೀಡಿತ್ತಿದ್ದೇವೆ. ರಾಜಣ್ಣ ಅವರು ಬಹಳ ಆಸಕ್ತಿಯಿಂದ ಈ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾರೆ. ನಾನು ಕೂಡ ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದಾಗ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಹಾಗೂ ಷಡಕ್ಷರಿ ಅವರನ್ನು ಎಸ್ ಎಲ್ ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು" ಎಂದು ಸ್ಮರಿಸಿದರು.
ಕೊಟ್ಟ ಮಾತಿನಂತೆ ನಡೆದಿದ್ದೇವೆ :
"ರೈತರ ಬದುಕು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದು ಜನರ ಆಶೋತ್ತರ ಈಡೇರಿಸಿದ್ದೇವೆ. 2027ರ ಒಳಗಾಗಿ ಎತ್ತಿನ ಹೊಳೆ ನೀರನ್ನು ತುಮಕೂರು ಮಾರ್ಗವಾಗಿ ಹರಿಸಲು ತೀರ್ಮಾನಿಸಿದ್ದೇವೆ. ಕುಡಿಯುವ ನೀರು ಪೂರೈಸಿದ ನಂತರ ಕೆರೆ ತುಂಬಿಸಲಾಗುವುದು" ಎಂದು ಭರವಸೆ ನೀಡಿದರು.