ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ರಾಜಣ್ಣ ಅವರ ದೊಡ್ಡ ಗುಣ : ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು : ಕೆ.ಎನ್.ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ. ಸಮಾಜದಲ್ಲಿನ ಎಲ್ಲ ಬಡವರ ಬಗೆಗಿನ ಕಾಳಜಿ ಹೊಂದಿದ್ದಾರೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಬಹಳ ದೊಡ್ಡ ಗುಣ. ಜಾತಿ, ಧರ್ಮ ಎಂಬ ಬೇಧವಿಲ್ಲದೇ ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ರಾಜಣ್ಣ ನೆರವು ನೀಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೆ.ಎನ್ ರಾಜಣ್ಣ ಅವರ 75 ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಮುಖ್ಯ ವಾಹಿನಿಗೆ ತರಬೇಕು ಎನ್ನುವುದೇ ನಿಜವಾದ ರಾಜಕೀಯ ಗುರಿ. ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಮನುಷ್ಯತ್ವ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದು ಇದ್ದಾಗ ಮಾತ್ರ ಸಮಸಮಾಜ, ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದಾಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಮಾಜಿಕ ಶಕ್ತಿಯನ್ನು ತುಂಬಬೇಕು. ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಎಲ್ಲರೂ ಸ್ವಾವಂಬಿಗಳಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ವೈರುಧ್ಯತೆ ಇರುವ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಸಮಸಮಾಜ ನಿರ್ಮಾಣವಾಗದೇ ಹೋದರೆ ಪ್ರಜಾಪ್ರಭುತ್ವದ ಸೌಧವನ್ನು ಜನರೇ ಧ್ವಂಸ ಮಾಡುತ್ತಾರೆ ಎಂದೂ ಕೂಡ ಹೇಳಿದ್ದರು ಎಂದರು.
ಸಾಲ ಮನ್ನಾ ಕಾರ್ಯಕ್ರಮದ ಶ್ರೇಯಸ್ಸು ರಾಜಣ್ಣನವರಿಗೆ ಸಲ್ಲಬೇಕು :
ರೈತರು ಸಾಲ ಮನ್ನಾ ಮಾಡಬೇಕೆಂದು ಒತ್ತಡ ತಂದಿದ್ದ ಸಂದರ್ಭದಲ್ಲಿ 50,000 ರೂ.ಗಳ ವರೆಗೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕುಗಳಲ್ಲಿ ರೈತರ ಸಾಲದ ಸಂಪೂರ್ಣ ವಿವರಗಳನ್ನು ನೀಡಿದವರು ರಾಜಣ್ಣ. ಅವರಿಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು :
ಹಣೆಬರಹ, ಕರ್ಮ ಸಿದ್ದಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದರು.
ಸಚಿವರಾದ ಜಿ. ಪರಮೇಶ್ವರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಕೆ.ಎನ್.ರಾಜಣ್ಣ ಅವರ ಕುಟುಂಬ ವರ್ಗ ಉಪಸ್ಥಿತರಿದ್ದರು.