ಪಾವಗಡ | ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಜಿಲಿಟಿನ್ ಕಡ್ಡಿ ಸ್ಪೋಟ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಪಾವಗಡ: ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಜಿಲಿಟಿನ್ ಕಡ್ಡಿಗಳು ಸ್ಟೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಪಾವಗಡ ತಾಲೂಕಿನ ತಿರುಮಣಿಯಲ್ಲಿ ನಡೆದಿದೆ.
ತಿರುಮಣಿಯ ರಾಯರ್ಚಲು ಸಮೀಪಖಾಸಗಿ ಸೋಲಾರ್ ಕಂಪನಿಯೊಂದು ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜಿಲಿಟಿನ್ ಕಡ್ಡಿಗಳು ಸ್ಪೋಟಗೊಂಡ ಪರಿಣಾಮ ರಾಯಚೂರು ಮೂಲದ ಬಸವರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಅಚ್ಚಮ್ಮನಹಳ್ಳಿಯ ಶಿವಯ್ಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಿಂದ ಪೊಲೀಸರು ಸುಮಾರು 54 ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಮರ್ ರಾಜನ್ ಖಾಸಗಿ ಸೋಲಾರ್ ಪಾರ್ಕ್ ಸಬ್ ಸ್ಟೇಷನ್ ನಿರ್ಮಾಣದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನಂದಿಸಲು ಹೋದ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲಿಟಿನ್ ಕಡ್ಡಿಗಳಿಗೆ ಬೆಂಕಿ ತಗಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಮರರಾಜನ್ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕಲ್ಲು ಬಂಡೆಗಳನ್ನು ಸ್ಪೋಟಕ ಮಾಡಲು ಸ್ಪೋಟಕಕ್ಕೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಬ್ಲಾಸ್ಟ್ ಮಾಡಲಾಗಿದ್ದು ಅಕ್ರಮ ಬ್ಲಾಸ್ಟ್ ನಿಂದಲೇ ಓರ್ವನ ಸಾವಾಗಿದೆ ಎಂದು ಸ್ಥಳಿಯರು ದೂರಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಅಬ್ದುಲ್ ಖಾದರ್ ಮತ್ತು ಮರಿಯಪ್ಪ ಸೇರಿದಂತೆ ತಾಲೂಕು ದಂಡಾಧಿಕಾರಿ ವರದರಾಜ, ಗ್ರಾಮಾಂತರ ಸಿಪಿಐ ಗಿರೀಶ್ ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.







