ವಿದ್ಯಾರ್ಥಿ ಜೀವನದಲ್ಲಿ ಕಲಿಯುವಂತಹ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತದೆ : ಶಾಸಕ ಎಚ್.ವಿ.ವೆಂಕಟೇಶ್

ಪಾವಗಡ : ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಜೀವನದಲ್ಲಿ ಯಾವುದಾದರೂ ಒಂದು ಸಾಧನೆ ಮಾಡಿ ಪೋಷಕರಿಗೆ ಒಳ್ಳೆಯ ಕೀರ್ತಿ ತರಬೇಕೆಂದು ತುಮಕೂರು ಜಿಲ್ಲಾ ತುಮಲ್ ಅಧ್ಯಕ್ಷ ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ದೊಡ್ಡಹಳ್ಳಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಕಲಿಯುವಂತಹ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತದೆ. ವಿದ್ಯಾರ್ಥಿ ದೆಸೆಯ ಶಿಸ್ತು ಬಹಳ ಪ್ರಾಮುಖ್ಯತೆಯಿಂದ ಕೂಡಿದೆ. ಹಾಗಾಗಿ ಶಿಸ್ತಿನ ಜೊತೆಗೆ ವಿದ್ಯಾಭ್ಯಾಸ ಪಡೆದುಕೊಳ್ಳಬೇಕೆಂದು ನುಡಿದರು.
ನಮ್ಮ ತಾಲೂಕಿನ ಬಡ ಕುಟುಂಬಗಳಿಂದ ಬಂದಂತಹ ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿನ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ, ವಿದ್ಯೆ ಕಲಿಸಿದ ಗುರುಗಳಿಗೂ ಬೆಳೆಸಿದ ತಂದೆ-ತಾಯಂದಿರಿಗೂ ಕೀರ್ತಿ ತರಬೇಕೆಂದು ಹೇಳಿದರು.
87ನೇ ಸ್ಥಾನದಲ್ಲಿ ಇದ್ದಂತಹ ಫಲಿತಾಂಶವನ್ನು 25ನೇ ಸ್ಥಾನಕ್ಕೆ ತಂದಂತಹ ಪ್ರಾಂಶುಪಾಲರಾದ ಕಸ್ತೂರಿ ಕುಮಾರ್ ಹಾಗೂ ವಾರ್ಡನ್ ಕುಮಾರ್ ಹಿರೇಮಠ ಅವರನ್ನು ಶಾಸಕ ಎಚ್‌ವಿ ವೆಂಕಟೇಶ್ ಶ್ಲಾಘಿಸಿದರು.
ಶಾಲೆಯಲ್ಲಿ ಸುಸರ್ಜಿತ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ಶಾಸಕ ಎಚ್‌ವಿ ವೆಂಕಟೇಶ್ ವಿತರಣೆ ಮಾಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದಂತಹ ಅಮೃತಬಾಯಿ, ಪವಿತ್ರ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆದಂತಹ ಶರತ್, ಯಶ್ವಂತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕಸ್ತೂರಿ ಕುಮಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಾಳಪ್ಪ, ತಿಪ್ಪೇಸ್ವಾಮಿ, ಸಂತೋಷ್, ಶ್ರೀನಿವಾಸಲು, ಕುಮಾರ್ ಹಿರೇಮಠ್, ಮಾರುತೀಶ್, ಓಂಕಾರಪ್ಪ, ಪರಮೇಶ್ ಸೇರಿದಂತೆ ಶಾಲೆ ಹಾಗೂ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.







