ʼಅವರು ಆರೆಸ್ಸೆಸ್ ಗೀತೆಯನ್ನು ಹಾಡಬಹುದು, ಅಂಬಾನಿ ಮಗನ ಮದುವೆಯಲ್ಲೂ ಪಾಲ್ಗೊಳ್ಳಬಹುದುʼ : ಡಿಕೆಶಿ ವಿರುದ್ಧ ರಾಜಣ್ಣ ವಾಗ್ದಾಳಿ

ರಾಜಣ್ಣ/ಡಿ.ಕೆ.ಶಿವಕುಮಾರ್
ತುಮಕೂರು : "ಅವರು ಆರೆಸ್ಸೆಸ್ ಗೀತೆಯನ್ನು ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು, ಅಂಬಾನಿ ಮಗನ ಮದುವೆಯಲ್ಲೂ ಪಾಲ್ಗೊಳ್ಳಬಹುದು, ಆದರೆ ನಾವು ಮಾಡಿದರೆ ಮಾತ್ರ ತಪ್ಪು. ಇದಕ್ಕೆ ಕಾಲವೇ ಉತ್ತರ ನೀಡಲಿದೆ" ಎಂದು ಮಾಜಿ ಸಹಕಾರ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಕಿಡಿಕಾರಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ವೇಳೆಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಮಸ್ಯೆಗಳು ಬಗೆಹರಿಯುತ್ತದೆಯೇ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ ನಂತರವೂ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬರತ್ತಾರೆ. ಕೋಮುವಾದಿಗಳಿಗೆ ಬೆಂಬಲವಾಗಿರುವ ಮುಖೇಶ್ ಅಂಬಾನಿ ಮಗನ ಮದುವೆಗೆ ಹೋಗುವುದಿಲ್ಲ ಎಂದು ಸ್ವತಃ ರಾಹುಲ್ ಗಾಂಧಿ ಅವರು ಹೇಳಿದ ನಂತರವೂ ಅಂಬಾನಿ ಮಗನ ಮದುವೆ ಹೋಗುತ್ತಾರೆ. ಆರೆಸ್ಸೆಸ್ ಕಾಂಗ್ರೆಸ್ ಸಿದ್ದಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್ ಗೀತೆ ಹಾಡುತ್ತಾರೆ. ಸದನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಶಾಸಕರ ಸಭೆ ನಡೆಸಬಹುದು, ನಾವು ನಡೆಸಿದರ ಅಪರಾಧ. ಈ ಎಲ್ಲಾ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.
ಡಿಸಿಸಿ ಬ್ಯಾಂಕಿನ 14 ನಿರ್ದೇಶಕ ಸ್ಥಾನಗಳ ಪೈಕಿ 8ಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 6 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಇದಾದ 15 ದಿನಗಳ ಒಳಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಬಹುತೇಕ ಕಳೆದ ಬಾರಿಯ ನಿರ್ದೇಶಕರೇ ಆಯ್ಕೆಯಾಗಲಿದ್ದಾರೆ. ಪಾವಗಡ ಶಾಸಕರೊಬ್ಬರು ಹೊಸದಾಗಿ ಚುನಾಯಿತರಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಪಕ್ಷವಿಲ್ಲ. ಎಲ್ಲರೂ ಒಂದೇ, ಕೆಲವರು ಹೊಸಬರು ಪ್ರಯತ್ನಿಸಿದ್ದಾರೆ.ಮತದಾರರು ಕೈ ಹಿಡಿಯಬೇಕು ಎಂದರು







