Tumkur | ಮೂಢನಂಬಿಕೆಗಳ ಮೇಲೆ ವ್ಯವಸ್ಥೆ ನಿಂತಿಲ್ಲ, ಸಂವಿಧಾನವೇ ಎಲ್ಲ: ತಹಶೀಲ್ದಾರ್ ಅಹಮ್ಮದ್

ತುಮಕೂರು : ಮೂಢನಂಬಿಕೆಗಳ ಮೇಲೆ ವ್ಯವಸ್ಥೆ ನಿಂತಿಲ್ಲ. ವ್ಯವಸ್ಥೆ ನಡೆಯುತ್ತಿರುವುದು ಸಂವಿಧಾನ ಮತ್ತು ಕಾನೂನುಗಳ ಮೇಲೆ. ಎಲ್ಲರೂ ಸಂವಿಧಾನವನ್ನು ಓದಿಕೊಂಡು ಸಂವಿಧಾನಬದ್ಧವಾಗಿ ನಡೆಯಬೇಕು ಎಂದು ತುರುವೇಕೆರೆ ತಹಶೀಲ್ದಾರ್ ಎನ್.ಎ.ಕುಂಞ.ಅಹಮ್ಮದ್ ಅಭಿಪ್ರಾಯಪಟ್ಟರು.
ಎ.18ರಂದು ದಲಿತ ಸಮುದಾಯದ ಕುಟುಂಬವೊಂದು ದೇವಾಲಯ ಪ್ರವೇಶ ಮಾಡಿದ್ದಕ್ಕೆ ಜಾತಿನಿಂದನೆ ಮಾಡಿದ ಪ್ರಕರಣ ಸಂಬಂಧ ಬುಧವಾರ ತಾಲ್ಲೂಕಿನ ಮಲ್ಲೂರು ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಮಲ್ಲೂರು ಗ್ರಾಮದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ, ಸಹೋದರ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸಾರ್ವಜನಿಕ ಸ್ಥಳ, ಸರಕಾರಿ ಸ್ಥಳಗಳಿಗೆ ಜಾತಿ, ಧರ್ಮದ ಹಂಗಿಲ್ಲ. ಎಲ್ಲವನ್ನೂ ದಾಟಿ ಬದುಕಬೇಕು. ಎಲ್ಲರ ದೇಹದಲ್ಲೂ ರಕ್ತವೇ ಹರಿಯುತ್ತದೆ. ತುರ್ತು ಸಂದರ್ಭ ಬಂದರೆ ರಕ್ತ ಕೊಡಲು ನಾವು ಜಾತಿ, ಧರ್ಮ ನೋಡುವುದಿಲ್ಲ. ಅಂತೆಯೇ ನಾವು ಮಾನವೀಯತೆ ಬೆಳೆಸಿಕೊಂಡು ಬದುಕಬೇಕು ಎಂದು ಅವರು ತಿಳಿಸಿದರು.
ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. 17ನೇ ವಿಧಿ ಅಸ್ಪೃಶ್ಯತೆ ನಿವಾರಣೆಗಾಗಿ ಇದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ಎಲ್ಲರೂ ಸಮಾನವಾಗಿ ಮಾನವರಂತೆ ಬದುಕೋಣ. "ಇವ ನಮ್ಮವ ಇವ ನಮ್ಮವ" ಎಂಬ ಬಸವಣ್ಣನ ವಚನದಂತೆ ನಮ್ಮ ಬದುಕು ರೂಪಿತವಾಗಲಿ. ಅಂಬೇಡ್ಕರ್, ಬುದ್ಧ, ಬಸವಣ್ಣ, ಕನಕದಾಸರ ಆಶಯಗಳು ಬದುಕಿಗೆ ದಾರಿಯಾಗಲಿ ಎಂದು ಕುಂ.ಞ.ಅಹಮ್ಮದ್ ತಿಳಿಸಿದರು.
ತುರುವೇಕೆರೆ ಪಿಎಸ್ಐ ಮೂರ್ತಿ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾಹಿತಿ ಸಿಕ್ಕಿದ ಒಂದೆರಡು ಗಂಟೆಗಳಲ್ಲೇ ಆರೋಪಿ ವಿರುದ್ಧ ಕ್ರಮ ಜರುಗಿಸಿದ್ದೇವೆ. ಕಾನೂನು ಮೊದಲಿನಂತಿಲ್ಲ, ಈಗ ಬಿಎನ್ಎಸ್, ಬಿಎನ್ಎಸ್ಎಸ್ ಬಂದ ನಂತರ ಕಾನೂನು ಬಹಳ ಕಠಿಣವಾಗಿದೆ. ಯಾರನ್ನೂ ಅಷ್ಟು ಸುಲಭಕ್ಕೆ ಬಿಡುವ ಮಾತಿಲ್ಲ. ಗ್ರಾಮೀಣ ಭಾಗದಲ್ಲಿ ಶಾಂತಿ ವಾತಾವರಣ ಇರಬೇಕು. ಎಲ್ಲರೂ ಕಾನೂನಿನೊಳಗಡೆ ಎಚ್ಚರಿಕೆಯಿಂದ ಬದುಕಬೇಕು ಎಂದರು.
ಪತ್ರಕರ್ತ ಯೋಗೇಶ್ ಮಲ್ಲೂರು ಮಾತನಾಡಿ, ಹುಟ್ಟುವಾಗ ಯಾರೂ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಹುಟ್ಟಿದ ನಂತರ ಈ ಜಾತಿ, ಧರ್ಮ ಅನ್ನುವ ಪೀಡೆ ಅಂಟಿಕೊಳ್ಳುತ್ತದೆ. ಯುವಜನಾಂಗ, ಅಕ್ಷರ ಜ್ಞಾನ ಇರುವವರು ಇದೆಲ್ಲವನ್ನೂ ಹೋಗಲಾಡಿಸಿ ಸಮಾನತೆಯಿಂದ ಬದುಕಬೇಕು. ಕುವೆಂಪು ಆಶಯದಂತೆ ವಿಶ್ವ ಮಾನವರಾಗಿ ಬಾಳಬೇಕು ಎಂದರು.
ಡಿಎಸ್ಎಸ್ ತಾಲೂಕು ಸಂಚಾಲಕ ಎಂ.ತಿಮ್ಮೇಶ್, ಕೆಆರ್ ಸ್ ಪಕ್ಷದ ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಚನ್ನಯ್ಯ ಮಾತನಾಡಿದರು.
ಸಭೆಯಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಈ ವೇಳೆ, ವಿಎಸ್ಎಸ್ಎನ್ ನಿರ್ದೇಶಕ ಮಧು ಎಂ., ಅರ್ಚಕರಾದ ರಂಗನಾಥ್, ಗ್ರಾಮಸ್ಥರಾದ ಹರೀಶ್ ಎಂ., ರಮೇಶ್ ಎಂ.ಆರ್., ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
"ದೇವರಿಗೆ ಮೈಲಿಗೆ ಆಗಲ್ಲ; ಮನಸು ಮೈಲಿಗೆ ಮಾಡಿಕೊಳ್ಳಬಾರದು"
ತುರುವೇಕೆರೆ ತಾಲೂಕಿನಲ್ಲಿ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಇದು ಎರಡನೇ ಘಟನೆಯಾಗಿದೆ. ಮೇಲಿನವಳಗೆರೆಹಳ್ಳಿಯಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ಇದುವರೆಗೂ ಆರೋಪಿಗೆ ಜಾಮೀನು ಸಿಕ್ಕಿಲ್ಲ. ಈಗ ಮಲ್ಲೂರು ಘಟನೆ ಎರಡನೇಯದು. ಸದ್ಯ ಆರೋಪಿಗೆ ಕಾನೂನು ಕ್ರಮವಾಗಿದೆ. ಇನ್ನುಮುಂದೆ ಗ್ರಾಮದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಹೋಗಬೇಕು. ದಲಿತರು ದೇವಾಲಯದೊಳಗೆ ಹೋಗುತ್ತಿದ್ದಂತೆ ದೇವರು ಮೈಲಿಗೆ ಆಗುವುದಿಲ್ಲ, ಆದರೆ, ನೀವು ಮನಸುಗಳನ್ನು ಮೈಲಿಗೆ ಮಾಡಿಕೊಳ್ಳಬೇಡಿ. ದೇವಸ್ಥಾನದಲ್ಲಿ ಸರ್ವರಿಗೂ ಮುಕ್ತ ಪ್ರವೇಶ ಕಲ್ಪಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಲ್ಲೂರಿನ ಜನರು ಸಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.






