ತಿಪಟೂರು | ವ್ಯಾಪಾರಿ ಕೊಲೆ ಪ್ರಕರಣಕ್ಕೆ ತಿರುವು: ಪತ್ನಿ ಸೇರಿ ನಾಲ್ವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ತಿಪಟೂರು: ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗುಜರಿ ವ್ಯಾಪಾರಿ ಕೊಲೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ 4, 2026ರಂದು ತಿಪಟೂರು ತಾಲ್ಲೂಕಿನ ರಂಗಾಪುರ ಸಮೀಪದ ಚಿಕ್ಕಕೊಟ್ಟಿಗೆಹಳ್ಳಿ ಗ್ರಾಮದ ಬಳಿ, ತಿಪಟೂರು ನಗರದ ಗಾಂಧೀನಗರ ನಿವಾಸಿಯಾಗಿದ್ದ ಹಾಗೂ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಮನ್ಸೂರ್ ಪಾಷಾ (31) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 23/2026 ಅಡಿಯಲ್ಲಿ ಕಲಂ 103 BNS ಪ್ರಕಾರ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಪತ್ತೆಹಚ್ಚಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಗೋಪಾಲ್ ಮತ್ತು ಪುರುಷೋತ್ತಮ ಎಂ.ಎಲ್. ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಂ.ಹೆಚ್. ಉಮೇಶ್ ಅವರ ಮಾರ್ಗಸೂಚನೆಯ ಮೇರೆಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ. ವೆಂಕಟೇಶ್ ಸಿ., ಸಿ.ಪಿ.ಐ. ಚಂದ್ರಶೇಖರ್ ಟಿ.ಕೆ., ತಿಪಟೂರು ನಗರ ಪಿ.ಐ. ರವಿಕುಮಾರ್, ಪಿ.ಎಸ್.ಐ. ರಾಮಣ್ಣ ಸಿ., ಪಿ.ಎಸ್.ಐ. ನಾಗರಾಜು (ಕೆ.ಬಿ. ಕ್ರಾಸ್), ಎ.ಎಸ್.ಐ. ಉಸ್ಮಾನ್ ಸಾಬ್, ಚಿಕ್ಕಲಕ್ಕೇಗೌಡ, ಹೆಡ್ ಕಾನ್ಸ್ಟೇಬಲ್ ಮೋಹನ್ ಕುಮಾರ್, ಕಾನ್ಸ್ಟೇಬಲ್ಗಳಾದ ಲೋಕೇಶ್, ಚೇತನ್, ದಕ್ಷಿಣಮೂರ್ತಿ, ಇಮ್ರಾನ್ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಮತ್ತು ರಮೇಶ್ ಅವರನ್ನೊಳಗೊಂಡ ತಂಡ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿತ್ತು.
ತನಿಖೆಯ ವೇಳೆ ಆರೋಪಿತರಾದ ಧನರಾಜ್ ಎಚ್.ಟಿ (24), ವೆಂಕಟೇಶ್ (24), ದರ್ಶನ್ (24), ಹಾಗೂ ಮನ್ಸೂರ್ ಪಾಷಾ ಅವರ ಪತ್ನಿ ಫರ್ಜಾನ್ ಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ, ಪಲ್ಸರ್ ಬೈಕ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ., ಐಪಿಎಸ್ ಅವರು ಪ್ರಶಂಸಿಸಿದ್ದಾರೆ.







