ತಿಪಟೂರು: 10 ಲಕ್ಷ ರೂ. ವಂಚನೆ ಪ್ರಕರಣ; ಓರ್ವ ಪೊಲೀಸ್ ವಶಕ್ಕೆ

ತಿಪಟೂರು: ಕಪ್ಪುಹಣ ವೈಟ್ ಮನಿ ಮಾಡುತ್ತೇವೆ ಎಂದು ವಂಚನೆ ಮಾಡಿ ಹಣ ಕಸಿದು ಪರಾರಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಸಬಾ ಹೋಬಳಿ ಕೆರೆಗೋಡಿ ರಂಗಾಪುರದಲ್ಲಿ ಶುಕ್ರವಾರ ನಡೆದಿದೆ.
ಘಟನೆ ವಿವರ:
ಹಾಸನ ಮೂಲದ ಮಂಜುನಾಥ್ ಎಂಬ ವ್ಯಕ್ತಿ ಮಂಡ್ಯ ಜಿಲ್ಲೆ ಬಸರಾಳು ಹೋಬಳಿಯ ಅಲೇಗೆರೆಯಲ್ಲಿ ಬೇಕರಿ ನಡೆಸುತ್ತಿದ್ದರು. ಈ ವೇಳೆ ಮಂಡ್ಯಜಿಲ್ಲೆ ನಾಗಮಂಗಲ ಮೂಲದ ಸಂತೋಷ್ ರೊಂದಿಗೆ ಸ್ನೇಹ ಬೆಳೆದು ಇಬ್ಬರು ಪರಸ್ಪರ ಹಣಕಾಸಿನ ವ್ಯವಹಾರದಲ್ಲಿ ತೊಡಗಿದ್ದರು.
ಈ ಮಧ್ಯೆ ತಿಪಟೂರಿನಲ್ಲಿ ಹತ್ತುಲಕ್ಷ ಹಣ ನೀಡಿದರೆ 15ಲಕ್ಷ ಹಣ ಕೊಡುತ್ತಾರೆ. 10ಲಕ್ಷ ರೂಪಾಯಿ ವೈಟ್ ಮನಿ ನೀಡಿದರೆ 15ಲಕ್ಷ ಹಣ ಬ್ಲಾಕ್ ಮನಿಯಾಗಿ ಕೊಡುತ್ತೇವೆ. ನಿಮ್ಮ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಆರಂಭದಲ್ಲಿ ಒಂದು ಲಕ್ಷದ ಐವತ್ತು ಸಾವಿರ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಸಂತೋಷ ಪಡೆದುಕೊಂಡಿದ್ದ. ನಂತರ ಜೂನ್12ರಂದು ತಿಪಟೂರು ತಾಲೂಕಿನ ರಂಗಾಪುರ ಮಠದ ಬಳಿ ಎಂಟುಲಕ್ಷದ ಐವತ್ತು ಸಾವಿರ ಹಣ ತೆಗೆದುಕೊಂಡು ಬರುವಂತ್ತೆ ತಿಳಿಸಿದ್ದ. ಅದರಂತೆ ಜೂನ್ 12ರಂದು ಗುರುವಾರ ರಂಗಾಪುರ ಮಠದ ಬಳಿ ಅಲೇಗೆರೆ ಮಂಜುನಾಥ್ ಮತ್ತು ಆತನ ಮಗ ಅಭಿಷೇಕ್ ಇಬ್ಬರು ತಮ್ಮ ಕಾರಿನಲ್ಲಿ ಬಂದಾಗ ಬೈಕ್ ನಲ್ಲಿ ಹಿಂಬಾಲಿಸಿ ಬಂದ ಸಂತೋಷ್ ಇಲ್ಲಿ ವ್ಯವಹಾರ ಮಾಡುವುದು ಬೇಡ, ಸಿ.ಸಿ.ಟಿವಿ ಕ್ಯಾಮರಗಳಿವೆ. ಜನರು ಇರುತ್ತಾರೆ. ಹಣ ತೆಗೆದುಕೊಂಡು ನನ್ನ ಬೈಕ್ ಹಿಂಬಾಲಿಸು ಎಂದು ನಾರಸೀಕಟ್ಟೆ ರಸ್ತೆ ಕಡೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಹಣ ತೆಗೆದುಕೊಂಡು ಹೋಗುತ್ತಿದ್ದಂತೆ.ಎಲ್ಲಿ ನೀನು ತಂದಿರುವ ಹಣ ಎಂದು ಕೇಳಿದ್ದಾಗ ಈ ಬ್ಯಾಗ್ ನಲ್ಲಿ ಹಣ ಇದೆ ಎಂದು ಮಂಜುನಾಥ್ ನ ಮಗ ಅಭಿಷೇಕ್ ಬ್ಯಾಗ್ ತೋರಿಸಿದ್ದಾನೆ. ಅಷ್ಟರಲ್ಲಿ 2 ಬೈಕ್ ಗಳಲ್ಲಿ ಸಂತೋಷ್ ಗೆಳೆಯರು ದಾರಿಯಲ್ಲಿಯೇ ಕಾಯುತ್ತಿದ್ದರು. ನಮ್ಮ ಹಣತಂದಿದ್ದೇವೆ. ನಿಮ್ಮ ಹಣತೋರಿಸಿ ಎಂದಾಗ ನೋಡು ನಮ್ಮ ಬ್ಯಾಗ್ ನಲ್ಲಿ 15ಲಕ್ಷ ಹಣ ಇದೆ ಎಂದು ತೋರಿಸುವಷ್ಟರಲ್ಲಿ ಅಭಿಷೇಕ್ ಬಳಿ ಇದ್ದ ಹಣದ ಬ್ಯಾಗ್ ಕಸಿದುಕೊಂಡು ಸಂತೋಷ್ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ತಕ್ಷಣವೇ ಮಂಜುನಾಥ್ ಹಾಗೂ ಅಭಿಷೇಕ್, ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡುಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಸಂತೋಷ್ ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಸರ್ಕಲ್ ಇನ್ಪೆಕ್ಟರ್ ಚಂದ್ರಶೇಖರ್ ಸಬ್ ಇನ್ಪೆಕ್ಟರ್ ನಾಗರಾಜು ನೇತೃತ್ವದ ತಂಡ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.