ತುಮಕೂರು | ದೇವಾಲಯ ಪ್ರವೇಶಕ್ಕೆ ತಡೆ, ಜಾತಿ ನಿಂದನೆ ಆರೋಪ ; ವಿದ್ಯಾಚೌಡೇಶ್ವರಿ ದೇವಸ್ಥಾನದ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲು

ವಿದ್ಯಾಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ
ತುಮಕೂರು : ದೇವಾಲಯದೊಳಗೆ ಪ್ರವೇಶವನ್ನು ತಡೆದು, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ವಿದ್ಯಾಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ ಸೇರಿದಂತೆ ಐವರು ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಗಡಿ ತಾಲ್ಲೂಕಿನ ಚಂದುರಾಯನಹಳ್ಳಿ ಗ್ರಾಮದ ಎಸ್.ಜಿ.ವನಜಾ ಎಂಬ ಮಹಿಳೆ ನೀಡಿರುವ ದೂರಿನ ಪ್ರಕಾರ, ʼನಾನು ದೇವಾಲಯಕ್ಕೆ ಕರ್ಪೂರ ಹಚ್ಚಲು ಹೋಗಿದ್ದಾಗ, ಸ್ವಾಮೀಜಿಯವರು ‘ಮಾದಿಗಳು ಬರುತ್ತಿದ್ದಾಳೆ, ಬಾಗಿಲು ಹಾಕಿ’ ಎಂದು ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, ವನಜಾ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಬಾಲಮಂಜುನಾಥ, ಅವರ ತಾಯಿ ರಾಜಮ್ಮ, ಚಿಕ್ಕಮ್ಮ ನಾಗಮ್ಮ ಮತ್ತು ಆಪ್ತರಾದ ಅಭಿಷೇಕ್ ಹಾಗೂ ಮಂಜುನಾಥ್ ವಿರುದ್ಧ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಹಾಗೂ ಇತರ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.





