ತುಮಕೂರು | ರಸ್ತೆಯಲ್ಲಿ ಕತ್ತರಿಸಿದ ದೇಹದ ಭಾಗ ಪತ್ತೆ ಪ್ರಕರಣ : ಮೂವರು ಆರೋಪಿಗಳ ಬಂಧನ

ರಸ್ತೆಯಲ್ಲಿ ಪತ್ತೆಯಾಗಿದ್ದ ದೇಹದ ಭಾಗಗಳು
ತುಮಕೂರು : ಕೊರಟಗೆರೆ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಮಹಿಳೆಯ ದೇಹದ ತುಂಡುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿ ಬಿಸಾಡಿ ಹೋಗಿದ್ದ ಆರೋಪಿಗಳನ್ನು ನಿನ್ನೆ(ಆ.10) ತುಮಕೂರು ಜಿಲ್ಲಾ ಪೋಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಲಿಂಗಾಪುರ, ಚಿಂಪುಗಾನಹಳ್ಳಿ ಗರುಡಚಲ ನದಿ, ಸಿದ್ದರಬೆಟ್ಟ ಆರಣ್ಯ ಪ್ರದೇಶಗಳಲ್ಲಿ ಮಾನವ ದೇಹದ ಭಾಗಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಬಿಸಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯನ್ನು ಬೆಳ್ಳಾವಿ ಮೂಲದ ಲಕ್ಷ್ಮಿ ದೇವಮ್ಮ(42) ಎನ್ನಲಾಗಿದೆ. ಕೊಲೆಯಾದ ಮಹಿಳೆಯ ಅಳಿಯನೇ ಮಹಿಳೆಯನ್ನು ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಡಾಕ್ಟರ್ ಆಗಿರುವ ರಾಮಚಂದ್ರಯ್ಯ( 47) , ತುಮಕೂರಿನ ಕುವೆಂಪುನಗರ ಸತೀಶ್ (38) ಮತ್ತು ಈತನ ಚಿಕ್ಕಪ್ಪನ ಮಗ ಕಿರಣ್ ಕೆಎಸ್ (32) ಅವರೊಂದಿಗೆ ಸೇರಿ ಅತ್ತೆ ಲಕ್ಷ್ಮೀ ದೇವಮ್ಮನನ್ನು ಕೊಲೆ ಮಾಡಿ ದೇಹದ ಅಂಗಾಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಕೊರಟಗೆರೆ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಎಸೆದು ಸಾಕ್ಷಿ ನಾಶಕ್ಕೆ ಯತ್ನಿಸಲಾಗಿತ್ತು ಎನ್ನಲಾಗಿದೆ.
ಆಗಸ್ಟ್ 7 ರಂದು ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಲಮ್ಮ ದೇವಸ್ಥಾನದ ಬಳಿ ಮೊದಲಿಗೆ ಒಂದು ಕೈ ಚೀಲದಲ್ಲಿ ಪತ್ತೆಯಾಗಿದ್ದು, ಮತ್ತೊಂದು ಕಿ.ಲೋ. ದೂರದಲ್ಲಿ ಇನ್ನೊಂದು ಕೈ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೊರಟಗೆರೆ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು.
ಈ ವೇಳೆ ಪೊಲೀಸರು 19 ಸ್ಥಳಗಳಲ್ಲಿ ಮೃತದೇಹದ ವಿವಿಧ ಭಾಗಗಳನ್ನು ಪತ್ತೆ ಹಚ್ಚಿ ಮೃತದೇಹ ಯಾರದ್ದು ಎಂದು ಕಂಡುಹಿಡಿಯುವ ನಿಟ್ಟಿನಲ್ಲಿ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆ ನಡೆಸಿ ದೂರುದಾರರನ್ನು ಕರೆಸಿ ಮೃತದೇಹ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದರು.
ಬೆಳ್ಳಾವಿಯಲ್ಲಿ ಅದೇ ದಿನ ತನ್ನ ಮಗಳನ್ನು ನೋಡಿಕೊಂಡು ಬರುತ್ತೇನೆ ಎಂದು ಹೋದ ಲಕ್ಷ್ಮಿದೇವಮ್ಮ ಕಾಣೆಯಾಗಿರುವ ಬಗ್ಗೆ ಪತಿ ಬಸವರಾಜು ದೂರು ದಾಖಲು ಮಾಡಿದ್ದರು. ಬಸವರಾಜು ಅವರನ್ನು ಕರೆಸಿ ಮೃತದೇಹದ ಭಾಗಗಳು ಹಾಗೂ ರುಂಡವನ್ನು ತೊರಿಸಿದಾಗ ಇದು ತನ್ನ ಪತ್ನಿಯದ್ದೇ ಎಂದು ಒಪ್ಪಿಕೊಂಡರು. ಆಗ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳು ಮೃತದೇಹದ ಭಾಗಗಳನ್ನು ಬಿಸಾಡಲು ಬಳಸಿದ ಬಿಳಿ ಬಣ್ಣದ ಕಾರಿನ ಮಾಲಿಕರನ್ನು ಪತ್ತೆ ಹಚ್ಚಿದಾಗ ಆರೋಪಿ ಸತೀಶ್ ಪೋಲೀಸರ ಬಳಿ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ.
ಕೊಲೆಯ ಮೊದಲನೇ ಆರೋಪಿ ರಾಮಚಂದ್ರಯ್ಯ ಸಾಕ್ಷಿ ನಾಶಮಾಡುವ ಉದ್ದೇಶದಿಂದಲೇ ದೇಹದ ಅಂಗಾಗಗಳನ್ನು ಬೇರೆಡೆ ಬಿಸಾಡಲಾಗಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್, ಎಂ.ಎಲ್.ಪುರುಷೋತ್ತಮ್ ರವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿ.ಎಸ್.ಪಿ ಮಂಜುನಾಥ, ಶಿರಾ ಡಿ.ಎಸ್.ಪಿ ಬಿ.ಕೆ.ಶೇಖರ್, ತುಮಕೂರು ಡಿ.ಎಸ್.ಪಿ ಚಂದ್ರಶೇಖರ್ ಕೆ.ಆರ್. ನೇತೃತ್ವದಲ್ಲಿ ಕೊರಟಗೆರೆ ಪಿ.ಐ ಅನಿಲ್ ಆರ್.ಪಿ, ಪಿ ಸುರೇಶ್, ಪಿಐಗಳಾದ ಕಾಂತರೆಡ್ಡಿ , ಹನುಮಂತರಾಯಪ್ಪ, ಅವಿನಾಶ್ ಅವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು .







