Tumkur | 14ನೇ ಶತಮಾನದ ‘ಜಾತ್ರೆ ವೀರಗಲ್ಲು' ಶಾಸನ ಪತ್ತೆ

ತುಮಕೂರು : 14ನೇ ಶತಮಾನದ ಮಹತ್ವದ ಸಾಂಸ್ಕೃತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ.ಕೊಟ್ರೇಶ್ ಹಾಗೂ ಡಾ.ಸುಧಾ ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ.
ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹವನ್ನು ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ‘ಸತ್ಯಮಂಗಲ’ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ.
ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆಂದರೆ ಅದರಲ್ಲಿ ಕೆತ್ತಲಾಗಿರುವ ಸಾಂಸ್ಕೃತಿಕ ಚಿತ್ರಣ. 14ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭಗಳನ್ನು ಹೊತ್ತುಕೊಂಡು ಸಂಭ್ರಮದಿಂದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕೆತ್ತಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ.
ಇತಿಹಾಸಕಾರರ ವಿಶ್ಲೇಷಣೆಯ ಪ್ರಕಾರ, ಜನಸಾಮಾನ್ಯರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶತ್ರುಗಳು ಅಥವಾ ದರೋಡೆಕೋರರು ಅಡ್ಡಿಪಡಿಸಿರಬಹುದು. ಆ ಸಮಯದಲ್ಲಿ ಜನರ ರಕ್ಷಣೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ವೀರನ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ.







