ತುಮಕೂರು | ಕಾಲು ಜಾರಿ ಕೆರೆಗೆ ಬಿದ್ದ ಮಕ್ಕಳು; ರಕ್ಷಿಸಲು ಹೋದ ತಂದೆ ಸೇರಿ ಮೂವರು ಮೃತ್ಯು

ಸಾಂದರ್ಭಿಕ ಚಿತ್ರ
ತುಮಕೂರು : ಸ್ನೇಹಿತೆಯ ಜೊತೆ ಕಾಲು ಜಾರಿ ಕೆರೆಗೆ ಬಿದ್ದ ಮಗಳನ್ನು ರಕ್ಷಣೆ ಮಾಡಲು ಹೋಗಿ ತಂದೆಯು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಕೆರೆಗೆ ಕಾಲುಜಾರಿ ಬಿದ್ದು ಸಾವನ್ನಪ್ಪಿದವರನ್ನು 48 ವರ್ಷದ ವೆಂಕಟೇಶ್, ಅವರ ಪುತ್ರಿ 12 ವರ್ಷದ ಶ್ರಾವ್ಯ ಮತ್ತು ಶ್ರಾವ್ಯಳ ಸ್ನೇಹಿತೆ 11 ವರ್ಷದ ಪುಣ್ಯ ಎಂದು ಗುರುತಿಸಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಯರೇಕಟ್ಟೆ ಗ್ರಾಮದ ವೆಂಕಟೇಶ್ ಅವರ ಪುತ್ರಿ ಶ್ರಾವ್ಯ, ಆಕೆಯ ಸ್ನೇಹಿತೆ ಪುಣ್ಯ ಸೇರಿ ಮೂವರು ಕೆರೆ ಕಡೆ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಶ್ರಾವ್ಯ ಮತ್ತು ಆಕೆಯ ಸ್ನೇಹಿತೆ ಪುಣ್ಯ ಕೆರೆಗೆ ಕಾಲು ಜಾರಿ ಬಿದ್ದರು ಎಂದು ಹೇಳಲಾಗಿದೆ.
ಇದನ್ನು ಕಂಡ ಮತ್ತೊಬ್ಬ ಸ್ನೇಹಿತೆ ಶ್ರಾವ್ಯಳ ತಂದೆ ವೆಂಕಟೇಶ್ ಗೆ ಕೂಗಿಕೊಂಡು ಮಾಹಿತಿ ತಿಳಿಸಿದ್ದಾಳೆ. ಕೂಡಲೇ ವೆಂಕಟೇಶ್ ತನ್ನ ಮಗಳು ಶ್ರಾವ್ಯ ಮತ್ತು ಆಕೆಯ ಸ್ನೇಹಿತೆ ಪುಣ್ಯಗಳನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ. ಆಗ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿದ್ದು ಕೆರೆಯಿಂದ ಮೂರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







