ತುಮಕೂರು | ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

ಸಾಂದರ್ಭಿಕ ಚಿತ್ರ
ತುಮಕೂರು : ಜಿಲ್ಲೆಯ ಹೆಬ್ಬಾಕದ ಗ್ರಾಮ ಪಂಚಾಯತ್ ಸದಸ್ಯರಾದ ನೀಲಕಂಠಸ್ವಾಮಿ ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇಂದು ಬೆಳಿಗ್ಗೆ ತಮ್ಮ ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ ತಕ್ಷಣ ನೀಲಕಂಠಸ್ವಾಮಿಯವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ತುಮಕೂರಿನ ಆಸ್ಪತ್ರೆಗೆ ಕರೆ ತರುವ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೀಲಕಂಠಸ್ವಾಮಿಯವರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಅವರ ಅಣ್ಣನ ಮಗನಾಗಿದ್ದು, ಮೃತರು ಪತ್ನಿ, ಮಗಳನ್ನು ಅಗಲಿದ್ದಾರೆ.
ನೀಲಕಂಠಸ್ವಾಮಿ ಈ ಹಿಂದೆ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು, ಈಗ ಹಾಲಿ ಗ್ರಾ.ಪಂ.ಸದಸ್ಯರಾಗಿದ್ದರು.
ಮೃತರ ಅಂತ್ಯಕ್ರಿಯೆಯು ಜುಲೈ 2ರಂದು 11ಗಂಟೆಗೆ ಹೆಬ್ಬಾಕ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕರ ಸಂತಾಪ:
ನೀಲಕಂಠಸ್ವಾಮಿ ನಿಧನಕ್ಕೆ ತುಮಕೂರು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬ ಮತ್ತು ಸಂಬಂಧಿಕರಿಗೆ ದುಃಖ ತಡೆಯುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.