ತುಮಕೂರು | ವಸತಿ ಶಾಲೆಯೊಂದರ ವಿದ್ಯಾರ್ಥಿ ಮಹಡಿ ಮೇಲಿಂದ ಬಿದ್ದ ಪ್ರಕರಣ : ಮೂವರ ವಿರುದ್ದ ಎಫ್‌ಐಆರ್ ದಾಖಲು

ತುಮಕೂರು : ವಸತಿ ಶಾಲೆಯೊಂದರ ವಿದ್ಯಾರ್ಥಿ ಮಹಡಿ ಮೇಲಿಂದ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ವಿದ್ಯಾರ್ಥಿನಿಯ ಹೇಳಿಕೆಯನ್ನು ಆಧರಿಸಿ ಮೂವರ ವಿರುದ್ದ ಎಫ್.ಐ.ಆರ್. ದಾಖಲಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅರವಿಂದ್ ಇಂಟರ್ನ್ಯಾಷನಲ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಮೋಕ್ಷ ಅವರು ಅ.13 ರಂದು ಹಾಸ್ಟೆಲ್ ನ ಮಹಡಿ ಮೇಲಿಂದ ಬಿದ್ದ ಪರಿಣಾಮ ಆಕೆಯ ತೊಡೆ ಮತ್ತು ಹಲ್ಲಿನ ಮೂಳೆ ಮುರಿದಿದ್ದು, ತುಟಿ ಮತ್ತು ಕತ್ತಿಗೆ ಗಂಭೀರ ಗಾಯಗಳಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಳು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಬೆಂಗಳೂರು ಮೂಲದ ರಾಮುಸ್ವಾಮಿ ಎಂಬುವವರ ಪುತ್ರಿ 15 ವರ್ಷದ ಮೋಕ್ಷ ಟಿಫನ್ ಬಾಕ್ಸ್ ಗೆ ತಿಂಡಿ ತುಂಬಿಕೊಳ್ಳುತ್ತಿರುವ ವಿಚಾರವಾಗಿ ಹಾಸ್ಟಲ್ ವಾರ್ಡನ್ ಮತ್ತು ಪಿ.ಇ.ಟೀಚರ್ ಬೈದಿದ್ದರು. ಇದೇ ವಿಚಾರವಾಗಿ ಅಂಟ್ಯನಿ ಎಂಬುವವರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟು, ಕ್ಷಮೆ ಕೇಳಿದ್ದರು, ಆಕೆಯನ್ನು ಬೈದು ಕೊಲಿನಿಂದ ಹೊಡೆದಿದ್ದರು ಎನ್ನಲಾಗಿದೆ.
ಇದೇ ವಿಚಾರವನ್ನು ತನ್ನ ತಂದೆಗೆ ಮೊಬೈಲ್ ಫೋನ್ ಮೂಲಕ ತಿಳಿಸುತ್ತಿದನ್ನು ಗಮನಿಸಿದ ಹಾಸ್ಟಲ್ ವಾರ್ಡನ್ ಮನೆಯವರಿಗೆ ಹೇಳದಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ.
ಇದಾದ ನಂತರ ಆಕೆ ಮಹಡಿ ಮೇಲಿದ್ದ ಬಟ್ಟೆ ತರಲು ಹೋದಾಗ ಮಹಡಿಯ ತುದಿಯಿಂದ ಯಾರೋ ಕರೆದಂತಾಗಿ, ಹೋಗಿ ನೋಡುವ ಸಂದರ್ಭದಲ್ಲಿ ಯಾರೋ ಹಿಂದಿನಿಂದ ತಳ್ಳಿದರು ಎಂದು ಮೋಕ್ಷ ನೀಡಿದ ಹೇಳಿಕೆಯನ್ನು ಆಧರಿಸಿ, ಹಾಸ್ಟಲ್ ವಾರ್ಡನ್ ಅಂಟ್ಯನಿ, ಶಿವಕುಮಾರಿ ಹಾಗು ಮತ್ತೊಬ್ಬರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.
ಪ್ರಕರಣದ ಕಾರಣ ಕೇಳಿ ಬಿಇಓ ನೋಟೀಸ್ ಜಾರಿ ಮಾಡಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸುವಂತೆ ಮೋಕ್ಷ ಪೋಷಕರು ಒತ್ತಾಯಿಸಿದ್ದಾರೆ.







