ಭಾರತ- ಪಾಕ್ ಯುದ್ಧ ಸಂದರ್ಭದಲ್ಲೂ ಹೆಚ್ಚದ ಟಿವಿ ರೇಟಿಂಗ್!

PC: indiamart.com
ಹೊಸದಿಲ್ಲಿ: ಭಾರತ- ಪಾಕಿಸ್ತಾನ ಯುದ್ಧದ ವಾರದಲ್ಲಿ ಸುದ್ದಿ ಚಾನಲ್ ಗಳು ಹಿಂದಿನ ವಾರಕ್ಕೆ ಹೋಲಿಸಿದರೆ ಕೇವಲ ಶೇಕಡ 24ರಷ್ಟು ಪ್ರಗತಿ ಸಾಧಿಸಿವೆ ಎಂದು ಬಿಎಆರ್ ಸಿ ಇಂಡಿಯಾ ಅಂಕಿ ಅಂಶಗಳು ತಿಳಿಸಿವೆ. ಹಿಂದಿ ಚಾನಲ್ ಗಳ ಪ್ರಗತಿ ದರ ಶೇಕಡ 29ರಷ್ಟಿದ್ದರೆ, ಇಂಗ್ಲಿಷ್ ಚಾನಲ್ ಗಳು ಕೇವಲ ಶೇಕಡ 26ರಷ್ಟು ಬೆಳವಣಿಗೆ ದಾಖಲಿಸಿವೆ.
ನಾಲ್ಕು ವಾರಗಳ ಪರ್ಯಾಯ ಸರಾಸರಿ ದತ್ತಾಂಶದ ಅನ್ವಯ ಯುದ್ಧ ನಡೆದ ಮೂರು ದಿನಗಳಲ್ಲಿ ಹಿಂದಿ ಸುದ್ದಿ ಚಾನಲ್ ಗಳು ಶೇಕಡ 48ರಷ್ಟು ವೀಕ್ಷಣೆ ಹೆಚ್ಚಿಸಿಕೊಂಡಿವೆ. ಬುಧವಾರ ಹಾಗೂ ಗುರುವಾರ ಶೇಕಡ 47ರಷ್ಟು ಪ್ರಗತಿ ದಾಖಲಾಗಿದ್ದರೆ, ಶುಕ್ರವಾರ ಶೇಕಡ 51ರಷ್ಟು ಪ್ರಗತಿ ಕಂಡುಬಂದಿದೆ.
ಮೇ 8ರಂದು ಉತ್ತರ ಭಾರತದ ನಗರಗಳ ಮೇಲೆ ಪಾಕಿಸ್ತಾನ ವಾಯುದಾಳಿ ಯತ್ನ ನಡೆಸಿದ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಅರ್ಧದಲ್ಲೇ ರದ್ದುಪಡಿಸಲಾಗಿತ್ತು. ದಾಳಿಯ ನಡುವೆ ಕೂಡಾ ಐಪಿಎಲ್ ಗೆ ಜನರು ಅಂಟಿಕೊಂಡಿದ್ದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಐಪಿಎಲ್ ಅಮಾನತುಗೊಂಡಿದ್ದರಿಂದ ಹಿಂದಿ ಸುದ್ದಿ ಚಾನಲ್ ಗಳಿಗೆ ವೀಕ್ಷಕರ ಏರಿಕೆ ಪ್ರಮಾಣ ಶೇಕಡ 4ರಷ್ಟು ಮಾತ್ರ ಆಗಿದೆ.
ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಚಾನಲ್ ಗೆ ಐಪಿಎಲ್ ಅಮಾನತಿಗೆ ಮುನ್ನ ರಾತ್ರಿ 8.30ರಿಂದ 9.30ರ ನಡುವೆ 9345 ಎಎಂಎ (000ಎಸ್) ಪ್ರಾಪ್ತವಾಗಿದ್ದು, ಒಟ್ಟು ಹಿಂದಿ ಸುದ್ದಿ ಚಾನಲ್ ಗಳು ಕೇವಲ 4834 ಎಎಂಎ (Average Minute Audience) ಗಳಿಸುವುದು ಸಾಧ್ಯವಾಗಿದೆ. ಒಂದು ದಿನ ಮೊದಲು ಅಂದರೆ ಮೇ 7ರಂದು ರಾತ್ರಿ 7.30ರಿಂದ ರಾತ್ರಿ 11ರವರೆಗೆ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ 9144 ಎಎಂಎ ಗಳಿಸಿದ್ದರೆ, ಹಿಂದಿ ಸುದ್ದಿ ಚಾನಲ್ ಗಳು 3919 ಎಎಂಎ ಪಡೆದಿದ್ದವು. ಅಂದರೆ ಯುದ್ಧದ ತೀವ್ರತೆ ಬುಧವಾರದಿಂದ ಗುರುವಾರಕ್ಕೆ ಹೆಚ್ಚಿದರೂ ಈ ಅವಧಿಯಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆ ಹೆಚ್ಚಿದ್ದನ್ನು ಬಿಎಆರ್ ಸಿ ಅಂಕಿ ಅಂಶಗಳು ದೃಢಪಡಿಸುತ್ತವೆ.







