ಪಾಕ್ ಸೇನಾ ಕಾಂಪೌಂಡ್ ಗೆ ಸ್ಫೋಟಕ ತುಂಬಿದ್ದ ಎರಡು ಕಾರುಗಳು ಢಿಕ್ಕಿ: 9 ಮಂದಿ ಮೃತ್ಯು

PC: x.com/NDTVWORLD
ಪೇಶಾವರ: ನೈರುತ್ಯ ಪಾಕಿಸ್ತಾನದಲ್ಲಿ ಸೇನಾ ಕಾಂಪೌಂಡ್ ಗೆ ಮಂಗಳವಾರ ಸಂಜೆ ಸ್ಫೋಟಕಗಳನ್ನು ತುಂಬಿದ್ದ ಎರಡು ಕಾರುಗಳನ್ನು ಢಿಕ್ಕಿ ಹೊಡೆಸಿದ ಉಗ್ರ ಸಂಘಟನೆಗಳಿಗೆ ಸೇರಿದ ಆತ್ಮಹತ್ಯಾ ಬಾಂಬರ್ ಗಳು ಒಂಬತ್ತು ಮಂದಿ ನಾಗರಿಕರ ಸಾವಿಗೆ ಕಾರಣರಾಗಿದ್ದಾರೆ.
"ಸಾವಿನ ಸಂಖ್ಯೆ ಸದ್ಯಕ್ಕೆ ಒಂಬತ್ತು ಇದೆ. ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಕನಿಷ್ಠ 20 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಖೈಬರ್ ಪಂಕ್ಟ್ವಾನಾ ಪ್ರಾಂತ್ಯದ ಬನ್ನು ಎಂಬಲ್ಲಿ ಈ ಘಟನೆ ನಡೆದಿದೆ. ಈ ಸ್ಫೋಟದಿಂದ ನಾಲ್ಕು ಅಡಿಯ ಕುಳಿಗಳು ಸೃಷ್ಟಿಯಾಗಿದ್ದು, ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕನಿಷ್ಠ ಎಂದು ಮನೆಗಳು ಹಾನಿಗೀಡಾಗಿವೆ ಎಂದು ಅವರು ವಿವರಿಸಿದ್ದಾರೆ.
ಇಬ್ಬರು ಆತ್ಮಹತ್ಯಾ ಬಾಂಬರ್ ಗಳ ಜತೆಗೆ ಆರು ಮಂದಿ ಉಗ್ರರನ್ನು ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಘಟನೆ ಬಳಿಕ 12 ಮಂದಿ ಉಗ್ರರು ಕಾಂಪೌಂಡ್ ಪ್ರವೇಶಿಸುವ ಪ್ರಯತ್ನ ಮಾಡಿದರು ಎಂದು ಗುಪ್ತಚರ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.





