ಉಡುಪಿ: ಕುಮ್ಕಿ ಜಾಗ ಮಂಜೂರಾತಿಗಾಗಿ ಸರಕಾರದ ಮೇಲೆ ಕಾಂಗ್ರೆಸ್ ಭವನ ಟ್ರಸ್ಟ್ ಒತ್ತಡ ?

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.17: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ಮಂಜೂರು ಮಾಡಲು ಉದ್ದೇಶಿಸಿರುವ ಜಮೀನು ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.
ಸ್ಮಶಾನ ಸೇರಿದಂತೆ ಇನ್ನಿತರ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿ ಮೀಸಲಿರಿಸಿದ್ದ ಸರಕಾರಿ ಜಮೀನುಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಹೆಬ್ರಿ ತಾಲೂಕಿನಲ್ಲಿ ಮಂಜೂರು ಮಾಡಿಸಿಕೊಳ್ಳಲು ಹೊರಟಿರುವ ಜಮೀನಿನ ಸ್ವರೂಪದ ಪ್ರಶ್ನೆಯು ಮುನ್ನೆಲೆಗೆ ಬಂದಿದೆ.
ಉಡುಪಿ ಜಿಲ್ಲೆ ಮತ್ತು ತಾಲೂಕಿನ ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಂದಾಜು 35 ಲಕ್ಷ ರೂ. ಮೌಲ್ಯದ ಗೋಮಾಳ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಇದೇ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿನ ಕುಮ್ಕಿ ಮಿತಿಯಲ್ಲಿರುವ ಜಾಗವನ್ನೂ ಮಂಜೂರು ಮಾಡಿಸಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಕಾಂಗ್ರೆಸ್ ಭವನ ಟ್ರಸ್ಟ್ ಕೋರಿರುವ ಜಮೀನು, ಪರಿಭಾವಿತ ಅರಣ್ಯಗಳು ಹಾಗೂ ಇತರೆ ಅರಣ್ಯಗಳ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಕುರಿತು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. 2025ರ ನವೆಂಬರ್ 7ರಂದು ಬರೆದಿರುವ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಅರಣ್ಯ ಇಲಾಖೆಯ ಪತ್ರದಲ್ಲೇನಿದೆ?:
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಸರ್ವೇ ನಂಬರ್ 307/1ರಲ್ಲಿ 1.58ರ ಪೈಕಿ 0.10 ಎಕರೆ ಕುಮ್ಕಿ ಮಿತಿಯಲ್ಲಿರುವ ಜಮೀನು ಪರಿಬಾವಿತ ಅರಣ್ಯಗಳ ಹಾಗೂ ಇತರೆ ಅರಣ್ಯ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯವನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು ಎಂದು 2025ರ ಆಗಸ್ಟ್ 2ರಂದೇ ಅರಣ್ಯ ಇಲಾಖೆಯು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿತ್ತು.
ಪ್ರಸ್ತಾವವನ್ನೇ ಪರಿಷ್ಕರಿಸಿದ್ದ ಕಾಂಗ್ರೆಸ್ ಭವನ ಟ್ರಸ್ಟ್: ಈ ಮಧ್ಯೆ ಕಂದಾಯ ಇಲಾಖೆಯು ಮತ್ತೊಂದು ಕಡತ ( ಸಂಖ್ಯೆಆರ್ಡಿ/33/ಎಲ್ಜಿಎ/2025) ಸಲ್ಲಿಸಿತ್ತು. ಕಾಂಗ್ರೆಸ್ ಭವನ
ಕಟ್ಟಡ ನಿರ್ಮಾಣ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ಮಂಜೂರು ಮಾಡಲು ಕೋರಿದ್ದ 0.10 ಎಕರೆ ಜಮೀನಿನ ಬದಲಾಗಿ 0.26.75 ಎಕರೆ ಪ್ರದೇಶಕ್ಕೆ ಮಂಜೂರು ಮಾಡಲು ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕಂದಾಯ ಇಲಾಖೆಯು ಕೋರಿತ್ತು ಎಂಬುದು ಕಡತದಿಂದ ತಿಳಿದು ಬಂದಿದೆ.
‘ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಂದಾಯ ಇಲಾಖೆಯು ಪ್ರಸ್ತಾಪಿಸಿರುವಂತೆ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಸರ್ವೇ ನಂಬರ್ 307/1ರಲ್ಲಿನ 0.26.75 ಎಕರೆ ಪ್ರದೇಶ ಕುಮ್ಕಿ ಮಿತಿಯಲ್ಲಿರುವ ಜಮೀನು ಪರಿಭಾವಿತ ಅರಣ್ಯಗಳ ಹಾಗೂ ಇತರೆ ಅರಣ್ಯ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ನಿಯಮಾನುಸಾರ ಪರಿಶೀಲಿಸಬೇಕು ಮತ್ತು ಸ್ಪಷ್ಟ ಅಭಿಪ್ರಾಯವನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು,’ ಎಂದು ಅರಣ್ಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿರುವುದು ಗೊತ್ತಾಗಿದೆ.
ಈ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 27ರ ಅಡಿ ವಿಶೇಷ ಪ್ರಕರಣ ಎಂದು ಪರಿಗಣಿಸಲು ಕಂದಾಯ ಇಲಾಖೆಯು ನಿರ್ಧರಿಸಿದೆ. ಹಾಗೆಯೇ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 79ರ ಅಡಿ ಕುಮ್ಕಿ ಹಕ್ಕಿನಿಂದ ವಿರಹಿತ
ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್ಗೆ ಮಂಜೂರು ಮಾಡಲು ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೋರಿರುವುದು ಸಹ ತಿಳಿದು ಬಂದಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಸಚಿವ ಈಶ್ವರ್ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡರು ಜಮೀನು ಮಂಜೂರು ಮಾಡಲು ಕ್ರಮ ವಹಿಸಿದ್ದಾರೆ ಎಂದು ಗೊತ್ತಾಗಿದೆ.







