ಬನ್ನಂಜೆ ಗೋವಿಂದಾಚಾರ್ಯರ ಕೃತಿ, ಗಾಯನ ಸಿಡಿ ಬಿಡುಗಡೆ

ಉಡುಪಿ, ಆ.10: ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದ ಆಚಾರ್ಯರ ನವತಿ ಜನ್ಮವರ್ಧಂತಿ ಕಾರ್ಯ ಕ್ರಮಗಳ ಉದ್ಘಾಟನೋತ್ಸವ ಶನಿವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಜರಗಿತು.
ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಸಂದೇಶ ನೀಡಿ, ಬನ್ನಂಜೆಯವರ ಕೃತಿಗಳನ್ನು ಕಾಲಕಾಲಕ್ಕೆ ಪ್ರಕಾಶಿಸಿ ಮುಂದಿನ ಪೀಳಿಗೆಗೆ ಆ ಕೃತಿಗಳ ಮೂಲಕ ಬನ್ನಂಜೆಯವರ ವಿಚಾರ ಧಾರೆಗಳನ್ನು ಉಳಿಸುವ ಕೆಲಸಕ್ಕಿಂತ ಮಿಗಿಲಾದುದಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ವಿಮರ್ಶಾದೃಷ್ಟಿ ಇಟ್ಟು ಕೊಂಡರೆ ಪ್ರತಿಯೊಬ್ಬರೂ ಬನ್ನಂಜೆಯಾಗುತ್ತಾರೆ. ಅದೂ ಅವರಿಗೆ ಸಲ್ಲಿಸುವ ಗೌರವ ಆಗುತ್ತದೆ ಎಂದರು.
ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀೀಂದ್ರ ತೀರ್ಥ ಸ್ವಾಮೀಜಿ ಸಂದೇಶ ನೀಡಿದರು. ಶತಾವಧಾನಿ ಡಾ.ರಾಮನಾಥಾಚಾರ್ಯ ಪ್ರಧಾನ ಉಪನ್ಯಾಸ ನೀಡಿ, ಬನ್ನಂಜೆಯವರ ಸಾಹಿತ್ಯ ,ತತ್ವಶಾಸ್ತ್ರ, ಭಾಷಾ ಸಂಶೋಧನೆಗಳ ಬಗ್ಗೆ ವಿಶ್ಲೇಶಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ ಶುಭಾಶಂಸನೆಗೈದರು. ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್, ಮಂಗಳೂರು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎ.ರಾಘವೇಂದ್ರ ರಾವ್, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಇಂಜಿನಿಯರ್ ರಮೇಶ್ ರಾವ್ ಬೀಡು, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ವಿದ್ವಾನ್ ಪಾವಂಜೆ ವಾಸುದೇವ ಭಟ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ.ಪ್ರಸನ್ನಾಚಾರ್ಯ, ಡಾ ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ ಉಪಸ್ಥಿತರಿದ್ದರು.
ಅಮೇರಿಕಾದ ದೀಪಕ್ ಕಟ್ಟೆ ಪ್ರಕಾಶಿಸಿದ ಬನ್ನಂಜೆಯವರ ಕವನಗಳ ಗಾಯನದ ಸಿಡಿ ಬಿಡುಗಡೆಗೊಂಡಿತು. ಸಮಿತಿ ಕೋಶಾಧಿಕಾರಿ ಪ್ರಸಾದ್ ಉಪಾಧ್ಯಾಯ ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥ ಬಾಲಾಜಿ ರಾಘವೇಂದ್ರ ಆಚಾರ್ಯ ಪ್ರಸ್ತಾವನೆಗೈದರು. ಸಮಿತಿ ಪ್ರಧಾನ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವಾರಿಜಾಕ್ಷಿ ಆರ್.ಭಟ್ ಬನ್ನಂಜೆಯವರ ಗೀತೆಯ ಗಾಯನಗೈದರು. ಬಳಿಕ ಮೈಸೂರಿನ ಕಲಾ ಸಂದೇಶ ಪ್ರತಿಷ್ಠಾನದ ನೃತ್ಯ ವಿದ್ವಾನ್ ಸಂದೇಶ ಭಾರ್ಗವ್ ಮತ್ತು ತಂಡದವರಿಂದ ವಿಶ್ವಾಮಿತ್ರ ಗಾಯತ್ರಿ ನೃತ್ಯರೂಪಕ ಮೂಡಿಬಂದಿತು.







