ಪರ್ಕಳ ರಾ.ಹೆದ್ದಾರಿ ಅವಾಂತರದಿಂದ ಬೃಹತ್ ಹೊಂಡ ಸೃಷ್ಟಿ!

ಉಡುಪಿ, ಆ.12: ಪರ್ಕಳ ಕೆನರಾ ಬ್ಯಾಂಕ್ ಎದುರು ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಆಕಾರದ ಹೊಂಡ ಸೃಷ್ಠಿಯಾಗಿದ್ದು, ಇದು ಪಾದಾಚಾರಿ ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯ ಮಣ್ಣು ಕೊಚ್ಚಿ ಹೋಗಿದ್ದು, ಇದರಿಂದ ಹೊಂಡ ನಿರ್ಮಾಣವಾಗಿದೆ. ಇದಕ್ಕೆ ಹೆದ್ದಾರಿಯ ಅಸಮರ್ಪಕ ಕಾಮಗಾರಿಯೇ ಕಾರಣ ಎಂದು ದೂರಲಾಗಿದೆ. ಇದರಿಂದ ಮಳೆ ನೀರು ಹೋಗಲು ಅಳವಡಿಸಿರುವ ಪೈಪ್ ಕೂಡ ಈ ಹೊಂಡದಿಂದ ಕಾಣುತ್ತಿದೆ.
ಈಗಾಗಲೇ ಉಡುಪಿ ನಗರದಲ್ಲಿ ಹಾಕಿದಂತೆ ರಾಷ್ಟ್ರೀಯ ಹೆದ್ದಾರಿ ಬದಿ ಇಂಟರ್‌ಲಾಕ್ ಹಾಕಿಲ್ಲ. ಇದು ರಸ್ತೆಯ ನೀಲನಕ್ಷೆಯಲ್ಲಿ ಇದೆ. ಆದರೆ ಇಲ್ಲಿ ಇನ್ನೂ ಪೂರ್ಣ ಪ್ರಮಾಣ ಕಾಮಗಾರಿ ಮಾಡಿಲ್ಲ. ಚರಂಡಿ ಕಾಮಗಾರಿ ಅರೆಬರೆಯಾಗಿದೆ. ರಸ್ತೆಯ ಡಿವೈಡರ್ ಕೂಡ ಇಲ್ಲ. ಪರ್ಕಳ ಪೇಟೆಯಲ್ಲಿ ಎಲ್ಲವೂ ಅರ್ಧಂಬರ್ಧ ಕೆಲಸ ಮಾಡಿರುವ ಕಾರಣ ಇಲ್ಲಿ ಹೊಂಡ ಬಿದ್ದಿದೆ.
ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ಪಾರ್ಕಿಂಗ್ ಮಾಡಲು ಬಂದರೆ, ಈ ಹೊಂಡಕ್ಕೆ ಬೀಳುವುದು ಖಚಿತ. ಕಬ್ಬಿಣದ ರಾಡ್‌ಗಳು ಫುಟ್ಬಾತ್‌ನಲ್ಲಿ ಎದ್ದು ನಿಂತ್ತಿರುವುದು ಕಂಡುಬರುತ್ತದೆ. ಪಾದಾಚಾರಿಗಳಿಗೆ, ವಾಹನ ಚಾಲಕರಿಗೆ ಅಪಾಯವಾಗುವ ಮೊದಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಿರುವರು ಎಚ್ಚೆತ್ತುಕೊಳ್ಳಬೇಕು. ಇಲ್ಲಿ ಕಾಮಗಾರಿ ಅರ್ಧಕ್ಕೆ ನಿಂತು ಐದಾರು ವರ್ಷಗಳಾಗಿವೆ ಪೂರ್ಣ ಪ್ರಮಾಣದ ಕಾಮಗಾರಿ ಕೂಡಲೇ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.





