ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರ ಪಾತ್ರ ಪ್ರಧಾನ: ಅನಸೂಯಾ ಪ್ರಭು

ಶಿರ್ವ, ಆ.12: ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಪರಂಪರೆಗಳನ್ನು ಮುಂದುವರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹಿಳೆಯರ ಪಾತ್ರವೇ ಪ್ರಧಾನವಾಗಿದೆ. ಅವಕಾಶಗಳನ್ನು ಧನಾತ್ಮಕವಾಗಿ ಬಳಸಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರು ಹಿಂದೆ ಬೀಳಬಾರದು ಎಂದು ಕುಂಜಾರುಗಿರಿ ಪಾಜಕ ಶ್ರೀಆನಂದತೀರ್ಥ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ ಪ್ರಾಧ್ಯಾಪಕಿ ಅನಸೂಯಾ ಪ್ರಭು ಹೇಳಿದ್ದಾರೆ.
ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ವತಿಯಿಂದ ಮಂಗಳವಾರ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಪ್ರಾಂಗಣದಲ್ಲಿ ಏರ್ಪಡಿಸಲಾದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾರಸ್ವತ ಸಂದೇಶ್ ಪತ್ರಿಕೆ ಸಂಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ನೈತಿಕ ಶಿಕ್ಷಣ, ಆದರ್ಶ ಮೌಲ್ಯಗಳನ್ನು ಜಾಗೃತಿಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಮುನಿಯಾಲು ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಗ್ರಂಥ ಪಾಲಕಿ ಜ್ಯೋತಿ ಮಾತನಾಡಿದರು. ಈ ಸಂದರ್ಭದಲ್ಲಿ ದೇವಳದ ಮಾಜಿ ಅಧ್ಯಕ್ಷ ಎಂ.ಬಿ.ನಾಯಕ್ ಬನ್ನಂಜೆ, ಕಲಾ ಸಾಧಕಿ ಉಷಾ ನಾಯಕ್, ಹಿರಿಯ ಯಕ್ಷಗುರು ಗುಳ್ಮೆ ನಾರಾಯಣ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ರ್ಆ.ಪಾರ್ಟ್ಕ ಶುಭ ಹಾರೈಸಿದರು. ಪ್ರಗತಿಪರ ಕೃಷಿ ಕುಟುಂಬದ ಹಿರಿಯ ದಂಪತಿ ಕರ್ವಾಲು ಸುಬ್ರಾಯ ಕಾಮತ್, ಕಲಾವತಿ ಕಾಮತ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಚಂಡೆ ಬಳಗದ ಅಧ್ಯಕ್ಷೆ ಬಂಟಕಲ್ಲು ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲಾವಿದೆ ಕುಸುಮಾ ಕಾಮತ್ ನಿರೂಪಿಸಿದರು.







