ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಆದ್ಯತೆಯಾಗಲಿ: ಉಡುಪಿ ಡಿಸಿ ಸ್ವರೂಪ ಟಿ.ಕೆ.

ಉಡುಪಿ, ಆ.13: ಯುವಜನತೆಯಲ್ಲಿ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ‘ನಶಾ ಮುಕ್ತ ಭಾರತ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದ್ದು, ಮಾದಕ ವ್ಯಸನ ಮುಕ್ತ ಸುಸ್ಥಿರ ಸಮಾಜ ನಿರ್ಮಾಣ ಪ್ರತಿಯೊಬ್ಬರ ಆದ್ಯತೆ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡುತಿದ್ದರು.
ಮಾದಕ ವ್ಯಸನ ಎಂಬುದು ಇಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಕೆಲವರು ಅತೀ ಚಿಕ್ಕ ವಯಸ್ಸಿಗೆ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿ ಯಾವುದೇ ವ್ಯಸನಕ್ಕೆ ಒಳಗಾದಲ್ಲಿ ಆತನ ಕುಟುಂಬ ಮತ್ತು ಸಮಾಜದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತದೆ. ಆದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಜೀವನದಿಂದಲೇ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.
ಯುವಶಕ್ತಿ ದೇಶದ ಆಸ್ತಿ. ಯುವ ಪೀಳಿಗೆ ಸಾಮಾಜಿಕ ಮತ್ತು ವೈಯಕ್ತಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಂಡು ವ್ಯಸನಮುಕ್ತ ಸಮಾಜಕ್ಕೆ ಕೊಡುಗೆ ನೀಡಬೇಕು. ಮಾದಕ ದ್ರವ್ಯ ಸೇವನೆಯ ಚಟಕ್ಕೆ ಒಳಗಾಗುವುದಿಲ್ಲ ಎಂಬ ಧೃಢ ವಾದ ನಿಲುವು ಹೊಂದಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟ ವಾಗುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಶಾಲಾ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಸ್ವಾಗತಿಸಿ, ಕನ್ನಡ ಭಾಷಾ ಶಿಕ್ಷಕಿ ತಾರಾಮತಿ ಕಾರ್ಯಕ್ರಮ ನಿರೂಪಿಸಿ ದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವಂದಿಸಿದರು.







