ದೃಷ್ಟಿ ಯೋಜನೆಯಿಂದ ಅಪರಾಧ ಪ್ರಕರಣಗಳು ನಿಯಂತ್ರಣ: ಎಸ್ಪಿ ಹರಿರಾಮ್ ಶಂಕರ್

ಕುಂದಾಪುರ, ಆ.13: ಉಡುಪಿ ಜಿಲ್ಲೆ ಶಾಂತಿಪ್ರಿಯರ ಜಿಲ್ಲೆಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಾರಣ ಬೇರೆ ರಾಜ್ಯ, ಜಿಲ್ಲೆಯ ಅಪರಾಧಿ ಗಳಿಂದ ಇಲ್ಲಿ ಅಪರಾಧ ಚಟುವಟಿಕೆಗಳು ಕಂಡುಬಂದಿದೆ. ಹೀಗಾಗಿ ದೃಷ್ಟಿ ಯೋಜನೆ ಜಿಲ್ಲೆಯಲ್ಲಿ 8 ಕಡೆ ಅನುಷ್ಠಾನವಾಗಿದ್ದು ಕುಂದಾಪುರದಲ್ಲಿ ಇನ್ನು ಚಿಕ್ಕನ್ಸಾಲ್ ರಸ್ತೆ, ಫೆರ್ರಿರಸ್ತೆಯಲ್ಲಿ ಚಾಲನೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದರು.
ಕುಂದೇಶ್ವರ ದೇವಾಲಯ ವಠಾರದಲ್ಲಿ ಬುಧವಾರ ಪೊಲೀಸ್ ಇಲಾಖೆಯಿಂದ ಆರಂಭಿಸಿದ ನೂತನ ಯೋಜನೆ ದೃಷ್ಟಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶೇ.50ರಷ್ಟು ಮನೆ, ಅಂಗಡಿ ಇತ್ಯಾದಿಗಳ ಸಮೂಹಕ್ಕೆ ಒಬ್ಬ ಕಾವಲು ಗಾರನನ್ನು ನಿಯೋಜಿಸಿ ಅವನ ಮೇಲ್ವಿಚಾ ರಣೆ ಪೊಲೀಸ್ ಇಲಾಖೆ ನಡೆಸುವ ವ್ಯವಸ್ಥೆ ಇದೆ. ಇದರಿಂದ ಅಪರಾಧಿಕ ಚಟುವಟಿಕೆ ಕಡಿಮೆಯಾಗುವುದಲ್ಲದೆ ಶೀಘ್ರ ಪತ್ತೆಗೆ ಸಹಕಾರಿಯಾಗಲಿದೆ. ದೃಷ್ಟಿ ಯೋಜನೆ ಮೂಲಕ ಸಮುದಾಯ ಪೊಲೀಸರ ಜತೆ ಕೈ ಜೋಡಿಸಿದರೆ ಅನುಕೂಲ ಆಗಲಿದೆ ಎಂದರು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾತನಾಡಿ, 60 ಮಳಿಗೆಗಳು, 3 ಬ್ಯಾಂಕ್, 3 ಸೊಸೈಟಿಗಳನ್ನು ಸೇರಿಸಿ ಒಂದು ವಿಭಾಗ ಮಾಡಲಾಗಿದೆ. ಜನರೊಂದಿಗೆ ಬೆರೆತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧ ಮುಕ್ತ ಜಿಲ್ಲೆಯಾಗಿಸುವುದು ದೃಷ್ಟಿ ಯೋಜನೆ ಉದ್ದೇಶವಾಗಿದೆ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ, ಕುಂದಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಟಿಎಪಿಸಿಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ವಿಎಸ್‌ಎಸ್ ಅಧ್ಯಕ್ಷ ಕೃಷ್ಣಮೂರ್ತಿ ಕುಂದಾಪುರ, ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಉಪಸ್ಥಿತರಿದ್ದರು.
ಕುಂದಾಪುರ ನಗರ ಠಾಣೆ ಎಸ್ಸೈ ನಂಜಾ ನಾಯ್ಕ್ ಸ್ವಾಗತಿಸಿದರು. ಸಿಬ್ಬಂದಿ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು. ಸಂಚಾರ ಠಾಣೆ ಎಸ್ಸೈ ನೂತನ್ ಕುಮಾರ್ ವಂದಿಸಿದರು.
‘ಜಿಲ್ಲೆಯ 201 ಕಡೆ ಜಂಕ್ಷನ್, ಗಡಿ ರಸ್ತೆಗಳನ್ನು ಗುರುತಿಸಲಾಗಿದ್ದು ಅಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸಬಲ್ಲ ಸಾಮರ್ಥ್ಯದ ಹಾಗೂ ಕಣ್ಗಾವಲಿನ ಕೆಮರಾಗಳನ್ನು ಅಳವಡಿಸಲಾಗುವುದು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಸಹಕಾರದಲ್ಲಿ 3 ತಿಂಗಳ ಒಳಗೆ ಈ ಕಾರ್ಯ ನಡೆಯಲಿದ್ದು ನ.1ರ ವೇಳೆಗೆ ಪೂರ್ಣಗೊಳಿಸಲಾಗುವುದು’
-ಹರಿರಾಮ್ ಶಂಕರ್, ಎಸ್ಪಿ ಉಡುಪಿ







