‘ಶ್ಯೇನ ದೃಷ್ಟಿ ಕೇಂದ್ರ’ಕ್ಕೆ ಚಾಲನೆ ನೀಡಿದ ಸಚಿವೆ ಹೆಬ್ಬಾಳ್ಕರ್

ಉಡುಪಿ, ಆ.14: ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ, ಉಡುಪಿ ನಗರ, ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾಗಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾ ದ್ಯಂತ ಅಳವಡಿಸಲು ಉದ್ದೇಶಿಸಲಾಗಿರುವ ಶ್ಯೇನ ದೃಷ್ಟಿ (ಹದ್ದಿನ ದೃಷ್ಟಿ-ಸಿಸಿಟಿವಿ ಅಳವಡಿಕೆ) ಕೇಂದ್ರಕ್ಕೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಸಚಿವರು ಮಾತನಾಡುತಿದ್ದರು.
ಸಿಸಿಟಿವಿ ಕೆಮರಾಗಳ ಅಳವಡಿಕೆಯಿಂದ ಜಿಲ್ಲೆಯಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಗಟ್ಟಬಹು ದಾಗಿದೆ ಎಂದ ಅವರು ಸುಮಾರು 2.5 ಕೋಟಿ ರೂ.ಗಳ ವೆಚ್ಚದಲ್ಲಿ ಜಿಲ್ಲೆಯ 207 ಜಂಕ್ಷನ್‌ಗಳಲ್ಲಿ 621 ನೈಟ್ ವಿಷನ್ ಕ್ಯಾಮೆರಾಗಳು ಮತ್ತು 10 ಜಿಲ್ಲಾ ಗಡಿ ರಸ್ತೆಗಳಲ್ಲಿ 20 ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಇದರ ವೆಚ್ಚವನ್ನು ಸಂಪೂರ್ಣವಾಗಿ ಉಡುಪಿ ಚೇಂಬರ್ ಆಫ್ ಕಾಮರ್ಸ್ ಭರಿಸಲಿದೆ. ಇದಕ್ಕಾಗಿ ತಾನು ಜಿಲ್ಲಾಡಳಿತ ಹಾಗೂ ಸರಕಾರದ ಪರವಾಗಿ ಚೇಂಬರ್ ಆಫ್ ಕಾಮರ್ಸ್ ಸಂಘಟನೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ ಎಸ್.ನಾಯ್ಕ್, ಚೇಂಬರ್ ಆಫ್ ಕಾಮರ್ಸ್‌ನ ಅಮ್ಮುಂಜೆ ಪ್ರಭಾಕರ ನಾಯಕ್, ಡಾ.ವಿಜಯೇಂದ್ರ ವಸಂತ, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.
ಸದ್ಯ ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಮಲ್ಪೆ ಬೀಚ್, ಮೇಲ್ ಗಂಗೊಳ್ಳಿ, ಕಾರ್ಕಳದ ಮಾಳ, ಹೊಸಾರು, ಸಾಣೂರು, ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೇಶ್ವರ, ಅಮಾಸೆಬೈಲಿನ ಹೊಸಂಗಡಿ, ಕೊಲ್ಲೂರಿನ ದಳಿ ಮುಂತಾದ ಕಡೆಗಳಲ್ಲಿ ಅಟೋಮೀಟಿಕ್ ನಂಬರ್ ಪ್ಲೇಟ್ ರೀಡರ್ (ಎಎನ್‌ಪಿಆರ್) ಕೆಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.







