ಸೇಡಿಯಾಪು ಪ್ರಶಸ್ತಿ- ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ

ಉಡುಪಿ, ಆ.16: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಆಶ್ರಯದಲ್ಲಿ 2025ನೇ ಸಾಲಿನ ಸೇಡಿಯಾಪು ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಡಾ.ಎಚ್.ವಿ.ನಾಗರಾಜ್ ರಾವ್ ಅವರಿಗೆ ಸೇಡಿಯಾಪು ಹಾಗೂ ಪ್ರಜ್ಞಾ ಮತ್ತಿಹಳ್ಳಿ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಲೇಖಕ ಡಾ.ಎಚ್.ವಿ.ನಾಗರಾಜ್ ರಾವ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತದ ಮಹತ್ವದ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗುವ ಮೂಲಕ ಇಲ್ಲಿನ ಶ್ರೇಷ್ಠ ಕೃತಿಗಳ ಪರಿಚಯ ಜಗತ್ತಿಗೆ ಆಗಬೇಕಾಗಿದೆ ಎಂದು ಹೇಳಿದರು.
ನೂರು ವರ್ಷಗಳ ಹಿಂದೆಯೇ ಸಂಸ್ಕೃತದ ಕೃತಿಗಳು ಜರ್ಮನ್ ಭಾಷೆಗೆ ಭಾಷಾಂತರಗೊಂಡಿದ್ದವು. ಸಂಸ್ಕೃತದ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಹಾಗೂ ಕನ್ನಡದ ಕೃತಿಗಳು ಸಂಸ್ಕೃತ ಭಾಷೆಗೆ ಅನುವಾದವಾಗಬೇಕೆಂದು ಅವರು ತಿಳಿಸಿದರು.
ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಅನ್ನ ಸಂಪಾದನೆಯಷ್ಟೇ ಬದುಕಲ್ಲ. ಅಭಿರುಚಿ, ಹವ್ಯಾಸಗಳು ಇರಬೇಕು. ಇಲ್ಲದಿದ್ದರೆ ನಿಕೃಷ್ಟ ಬದುಕು ನಮ್ಮದಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ದೇವಿದಾಸ್ ಎಸ್. ನಾಯ್ಕ್ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಶ್ರೀಧರ್ ಆರ್. ಪೈ, ಸೇಡಿಯಾಪು ಪ್ರಶಸ್ತಿ ಸಮಿತಿಯ ಎಸ್.ಜೆ.ಭಟ್, ಪ್ರಾಧ್ಯಾಪಕ ಎಚ್.ಮಹೇಶ್ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಅವರ ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಬಿಡುಗಡೆಗೊಳಿಸ ಲಾಯಿತು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ ಕುಮಾರ್ ಕೃತಿ ಪರಿಚಯ ಮಾಡಿ ದರು. ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನ ಕೇಂದ್ರದ ಆಡಳಿತಾ ಧಿಕಾರಿ ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.







