ಬೈಂದೂರು: ಮಳೆಗೆ ಮನೆ ಸಂಪೂರ್ಣ ಹಾನಿ

ಉಡುಪಿ, ಆ.16: ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಬೈಂದೂರು ತಾಲೂಕು ನಾವುಂದ ಗ್ರಾಮದ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ.
ನಾವುಂದದ ಕೃಷ್ಣ ಪೂಜಾರಿ ಎಂಬವರ ಮನೆ ಶುಕ್ರವಾರ ಭಾರೀ ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು, ಇದರಿಂದ ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿಯ ಮಾಹಿತಿ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡ ಪ್ರದೇಶದಿಂದಾಗಿ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಬೀಳಲಿದ್ದು, ಆಗಾಗ ವೇಗದ ಗಾಳಿಯೂ ಬೀಸಲಿದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಪ್ರಮುಖ ಬಂದರುಗಳಲ್ಲಿ ಎಚ್ಚರಿಕೆಯ ಸಂಖ್ಯೆ ಮೂರನ್ನು ಪ್ರದರ್ಶಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
Next Story





