ಹಿರಿಯ ಪತ್ರಕರ್ತರ ಮಂಜುನಾಥ್ ಭಟ್‌ಗೆ ಶ್ರದ್ಧಾಂಜಲಿ ಸಭೆ

ಉಡುಪಿ, ಆ.19: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತರ ಮಂಜುನಾಥ್ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಪತ್ರಕರ್ತರಾದ ಕುಮಾರಸ್ವಾಮಿ ನುಡಿನಮನ ಸಲ್ಲಿಸಿ, ಮಂಜುನಾಥ್ ಭಟ್ ಕಷ್ಟದಿಂದ ಬೆಳೆದು ಬಂದ ವರು. ವಿದ್ಯಾರ್ಥಿ ಜೀವನದಲ್ಲಿ ಹಿರಿಯ ಸಾಹಿತಿಗಳ ಚರ್ಚಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಸಾಹಿತ್ಯದತ್ತ ಒಲವು ಬೆಳೆಸಿಕೊಂಡರು. ಉಪ ಸಂಪಾದಕರಾಗಿ ಡೆಸ್ಕ್‌ನಲ್ಲಿಯೇ ಕುಳಿತು ಸ್ಥಳದಲ್ಲಿ ಸುದ್ದಿ ಮಾಡುವ ವರದಿಗಾರನಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಸುದ್ದಿಯನ್ನು ಬರೆಯುತ್ತಿದ್ದರು ಎಂದು ಹೇಳಿದರು.
ನಮ್ಮ ಬಾಲ್ಯ, ಯವ್ವನದಂತೆ ಮಾಧ್ಯಮ ರಂಗ ಕೂಡ ಮಾಯಲೋಕ ಆಗಿದೆ. ಅದರಲ್ಲಿ ಬೇಗ ಬೇಗವೇ ನಾವು ನಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ. ಯಾವುದೇ ಹೆಸರು ಹಾಕದೆ, ಕ್ರೆಡಿಟ್ ಪಡೆಯದೆ ಅತ್ಯುತ್ತಮ ಸುದ್ದಿಯನ್ನು ತಯಾರಿಸುವ ಅವರ ಸೇವೆಯೇ ಅದ್ಭುತವಾಗಿದೆ. ಈ ಮೂಲಕ ಅವರು ಪತ್ರಿಕೋದ್ಯಮದಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಬಿ.ಬಿ.ಶೆಟ್ಟಿಗಾರ್ ಮಾತನಾಡಿ, ಉಪಸಂಪಾದಕ ಅಂದರೆ ಹೇಗೆ ಇರಬೇಕು ಎಂಬುದಕ್ಕೆ ಭಟ್ಟರು ಅತ್ಯುತ್ತಮ ಮಾದರಿ. ವರದಿಗಾರರಿಂದ ಡೆಸ್ಕ್‌ನಲ್ಲಿ ಕುಳಿತು ವರದಿಯನ್ನು ಪಡೆಯುವ ಅವರ ಕುತೂಹಲವೇ ಆ ಸುದ್ದಿಯನ್ನು ಇನ್ನಷ್ಟು ಸುಂದರವಾಗಿಸುತ್ತಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಂದು ಮೂಲೆಯಲ್ಲಿ ಕುಳಿತು ಎಲೆಯ ಮರೆಯ ಕಾಯಿಯಂತೆ ವರದಿ ಮಾಡುತ್ತಿದ್ದರು. ಅವರ ವರದಿಯು ತುಂಬಾ ದೀರ್ಘ ಹಾಗೂ ಸ್ಪಷ್ಟವಾದ ಬರವಣಿಗೆಯಿಂದ ಕೂಡಿತ್ತು ಎಂದರು.
ಉಡುಪಿ ವಾರ್ತಾಧಿಕಾರಿ ಮಂಜುನಾಥ್, ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪತ್ರಕರ್ತ ರಾಜು ಖಾರ್ವಿ ನುಡಿನಮನ ಸಲ್ಲಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಹೀಂ ಉಜಿರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







