ಕರಾವಳಿ ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗೆ ಹಿಂದಿನಂತೆ ಅವಕಾಶ ನೀಡುವಂತೆ ಮನವಿ

ಯಶ್ಪಾಲ್ ಸುವರ್ಣ
ಉಡುಪಿ, ಆ.22: ಕರಾವಳಿಯ ಜಿಲ್ಲೆಯ ಧಾರ್ಮಿಕ ಆಚರಣೆಗಳನ್ನು ಈ ಹಿಂದಿನಂತೆಯೇ ನಡೆಸಲು ಕಾನೂನು ನಿಯಮಗಳನ್ನು ಸರಳೀಕರಣಗೊಳಿಸಿ ಅವಕಾಶ ನೀಡುವಂತೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಕರಾವಳಿ ಭಾಗಗಳಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಾದ ಕೋಲ, ನೇಮೋತ್ಸವ, ಜಾತ್ರಾ ಮಹೋತ್ಸವ, ನಾಗಮಂಡಲ, ಯಕ್ಷಗಾನ ಮೊದಲಾದವುಗಳನ್ನು ಅನಾದಿ ಕಾಲದಿಂದ ಶ್ರದ್ಧಾಭಕ್ತಿಯಿಂದ ಆಚರಿಸಿ ಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಸಾರ್ವಜನಿಕ ಶ್ರೀಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನವರಾತ್ರಿ ಉತ್ಸವಗಳನ್ನು ಧಾರ್ಮಿಕತೆ ಮತ್ತು ಅದ್ದೂರಿಯಿಂದ ಆಚರಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಈ ಎಲ್ಲಾ ಆಚರಣೆಗಳನ್ನು ನಡೆಸಲು ಕಠಿಣ ನಿಯಮಗಳನ್ನು ಕಡ್ಡಾಯ ವಾಗಿ ಪಾಲನೆ ಮಾಡುವಂತೆ ಸೂಚಿಸುವ ಮೂಲಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲ ವಾಗುತ್ತಿದೆ. ಶೋಭಾಯಾತ್ರೆ ಆಯೋಜನೆ, ಧ್ವನಿವರ್ಧಕ ಬಳಕೆಯ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಂಪ್ರದಾಯಿಕ ವಾಗಿ ಹಬ್ಬಗಳನ್ನು ಆಚರಿಸಲು ತೊಂದರೆಯಾಗುತ್ತಿದೆ.
ಕರಾವಳಿ ಜಿಲ್ಲೆಯ ಸಾರ್ವಜನಿಕ ಹಬ್ಬಗಳು ಹಾಗೂ ಧಾರ್ಮಿಕ ಆಚರಣೆಗಳಿಗೆ ನಿಯಮಗಳನ್ನು ಸರಳೀಕರಣ ಗೊಳಿಸಿ ತ್ವರಿತವಾಗಿ ಅನುಮತಿ ನೀಡಲು ಅವಕಾಶ ಮಾಡಬೇಕೆಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.







