ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅವ್ಯವಹಾರ: ಸಮಗ್ರ ತನಿಖೆಗೆ ಸಿಐಟಿಯು ಆಗ್ರಹ

ಉಡುಪಿ, ಆ.22: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2019ರಿಂದ 2025ರವರೆಗೆ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದೆ.
ಕೊವೀಡ್ ಸಮಯದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 258 ಕೋಟಿ ರೂ. ಅಕ್ರಮ ಎಸೆಗಿದೆ ಎಂದು ಸಿಎಜಿ ವರದಿ ಬಯಲುಗೊಳಿಸಿದ ವರದಿಯನ್ನು ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿದೆ. ಇದು ಬಡ ಕಾರ್ಮಿಕರಿಗೆ ಅಂದಿನ ಬಿಜೆಪಿ ಸರಕಾರ ಮತ್ತು ಅಧಿಕಾರಿಗಳು ಮಾಡಿದ ಮಹಾದ್ರೋಹವಾಗಿದೆ.
ಇಂತಹ ಹಣಕಾಸಿನ ಅವ್ಯವಹಾರಗಳು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಅವ್ಯಾಹತವಾಗಿ ಮುಂದುವರೆದಿದ್ದು ಈ ಹಿನ್ನಲೆಯಲ್ಲಿ ಒಟ್ಟಾರೆ 2019ರಿಂದ 2025ರವರೆಗಿನ ಮಂಡಳಿಯ ಎಲ್ಲ ಅವ್ಯವಹಾರ ಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಆ ಮೂಲಕ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಆ ಮೂಲಕ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ, ಶೇಖರ ಬಂಗೇರ ಹಾಗೂ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.







