ಇಬ್ಬರು ಆರೋಪಿಗಳ ಬಂಧನಾದೇಶ ಎತ್ತಿ ಹಿಡಿದ ಹೈಕೋರ್ಟ್

ಉಡುಪಿ, ಆ.22: ಉಡುಪಿ ಜಿಲ್ಲೆಯ ಇಬ್ಬರು ಆರೋಪಿಗಳ ಬಂಧನ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್, ಇಬ್ಬರ ಒಂದು ವರ್ಷದವರೆಗಿನ ಬಂಧನ ಆದೇಶವನ್ನು ಸ್ಥಿರೀಕರಿಸಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಕೊಳಲಗಿರಿ ಚಕ್ಕುಲಿಕಟ್ಟೆಯ ಕೃಷ್ಣ ಆಚಾರಿ ಅಲಿಯಾಸ್ ಕೃಷ್ಣ ಜಲಗಾರ (43) ಹಾಗೂ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೌಡೂರು ಗ್ರಾಮದ ಕಂಪನದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಬಂಧಿತ ಆರೋಪಿಗಳು.
ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದ ಆರೋಪಿ ಕೃಷ್ಣ ಜಲಗಾರನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿದ ಮಂಗಳೂರು ಪಶ್ಛಿಮ ವಲಯ ಐಜಿಪಿ ಆತನ ವಿರುದ್ಧ ಮೇ19ರಂದು ಬಂಧನ ಆದೇಶ ಹೊರಡಿಸಿದ್ದರು. ಅದರಂತೆ ಬ್ರಹ್ಮಾವರ ಎಸ್ಸೈ ಮೇ 20ರಂದು ಆರೋಪಿಯನ್ನು ಬಂಧಿಸಿ ಧಾರವಾಡ ಸೆಂಟ್ರಲ್ ಜೈಲಿಗೆ ಕಳುಹಿಸಿ ಕೊಟ್ಟಿದ್ದರು.
ಜು.1ರಂದು ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ಈ ಕಾಯ್ದೆಯನ್ವಯ ಹೊರಡಿಸಲಾದ ಬಂಧನ ಆದೇಶದ ಬಗ್ಗೆ ವಿಚಾರಣೆ ನಡೆದಿದ್ದು, ಹೈಕೋರ್ಟ್ ಐಜಿಪಿ ಆದೇಶವನ್ನು ಎತ್ತಿ ಹಿಡಿದು ಬಂಧಿತ ಆರೋಪಿಗೆ ಮೇ 20ರಿಂದ 1 ವರ್ಷದ ವರೆಗೆ ಬಂಧನ ಆದೇಶವನ್ನು ಸ್ಥಿರೀಕರಿಸಿದೆ. ಬಂಧಿತ ಆರೋಪಿ ವಿರುದ್ಧ ಒಟ್ಟು 4 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದ್ದು, ಇನ್ನುಳಿದ 2 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದೆ.
ಗೂಂಡಾ ಕಾಯ್ದೆಯಡಿ ಬಂಧನ: ಗರುಡ ಗ್ಯಾಂಗ್‌ನ ಸದಸ್ಯ ಹಾಗೂ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ತನ್ನ ಅಪರಾಧಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪಿ ಕಬೀರ್ ಹುಸೇನ್ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಅದರಂತೆ ಕಾರ್ಕಳ ನಗರ ಪೊಲೀಸರು ಜು.10ರಂದು ಆತನನ್ನು ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕಳುಹಿಸಿದ್ದರು.
ಆ.4ರಂದು ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ಈ ಕಾಯ್ದೆಯನ್ವಯ ಹೊರಡಿಸಲಾದ ಬಂಧನ ಆದೇಶದ ಬಗ್ಗೆ ವಿಚಾರಣೆ ನಡೆದು, ಹೈಕೋರ್ಟ್ ಜಿಲ್ಲಾಧಿಕಾರಿಯವರ ಆದೇಶವನ್ನು ಎತ್ತಿ ಹಿಡಿದು ಬಂಧಿತ ಆರೋಪಿಗೆ ಜು.10ರಿಂದ ಒಂದು ವರ್ಷದವರೆಗೆ ಬಂಧನ ಆದೇಶವನ್ನು ಸ್ಥಿರೀಕರಿಸಿದೆ.
ಆರೋಪಿ ವಿರುದ್ಧ 2005ನೇ ಸಾಲಿನಿಂದ ಈವರೆಗೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದ್ದು, 8 ಪ್ರಕರಣಗಳಲ್ಲಿ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿ ನುಡಿದದ್ದರಿಂದ ಖುಲಾಸೆ, 3 ಪ್ರಕರಣಗಳು ರಾಜಿಯಲ್ಲಿ ಮುಕ್ತಾಯಗೊಂಡಿವೆ. 2 ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿದ್ದು, ಇನ್ನುಳಿದ 2 ಪ್ರಕರಣಗಳು ತನಿಖೆಯಲ್ಲಿವೆ.
ಸಜೆಯಾದ ಪ್ರಕರಣಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯಲ್ಲಿ 2012ನೇ ಸಾಲಿನಲ್ಲಿ ವರದಿಯಾದ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯವು ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ 50,000ರೂ. ದಂಡ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.







