ಉಡುಪಿ ಚಿತ್ರಕಲಾ ಮಂದಿರದ ಕಲಾವಿದರಿಂದ ಸಮೂಹ ಪ್ರದರ್ಶನ

ಉಡುಪಿ, ಆ.23: ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ ಕಲಾ ಪದವಿಯನ್ನು 2002-2007ರ ಸಾಲಿನಲ್ಲಿ ಪೂರೈಸಿದ ಕಲಾವಿದರ ತಂಡದಿಂದ ಸಮೂಹ ಚಿತ್ರಕಲಾ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮ ವನ್ನು ಶನಿವಾರ ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕ ದಿವಾಕರ್ ಸನಿಲ್ ಹಾಗೂ ಕಲಾಶಾಲೆಯ ನಿರ್ದೇಶಕ ಡಾ.ನಿರಂಜನ್ ಯು.ಸಿ. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗುರುಗಳಾದ ಕಲಾಭೀಷ್ಮ ದಿ.ಕೆ.ಎಲ್.ಭಟ್ ಅವರ ಸಂಸ್ಮರಣೆ, ಕಲಾವಿದ ಗುರುಗಳಾದ ವಿಶ್ವೇಶ್ವರ ಪರ್ಕಳ, ಡಾ.ನಿರಂಜನ್ ಯು.ಸಿ., ಡಾ.ವಿಶ್ವನಾಥ ಎ.ಎಸ್., ಬಸವರಾಜ ಕುತ್ನಿ, ಸುಮಂಗಲಾ ಭಟ್, ಡಾ.ಭಾರತಿ ಮರವಂತೆ, ಮಹೇಶ್ ಉಮತಾರ್, ಗಣೇಶ್ ಮಂದಾರ, ಶಂಕರ್ ಹಂದಾಡಿ ಹಾಗೂ ಮುರಳಿ ಕೃಷ್ಣ ರಾವ್ ಅವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಲಾಪ್ರದರ್ಶನದಲ್ಲಿ ಕಲಾವಿದರಾದ ಅನ್ನಪೂರ್ಣ ಕಾಮತ್, ಡಾ. ಜನಾರ್ದನ ರಾವ್ ಹಾವಂಜೆ, ಕಾಂತಿ ನವೀನ್ ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ್ ಎಸ್.ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧ ಎಸ್. ಸನಿಲ್ ರಚಿಸಿರುವ ಗಣೇಶ ಹಾಗೂ ಸಮಕಾಲೀನ ಶೈಲಿಯ ಸುಮಾರು 25ರಷ್ಟು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನವು ಆ.23ರಿಂದ ಆ.31ರ ತನಕ ಅಪರಾಹ್ನ 2ರಿಂದ 6ರವರೆಗೆ ಕಲಾಸಕ್ತ ವೀಕ್ಷಣೆಗೆ ತೆರೆದಿರಲಿದೆ.







