ಸಹಕಾರ ಸಂಘಗಳ ಅಧ್ಯಕ್ಷರು, ಸಿಇಓಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ಉಡುಪಿ: ಕರ್ನಾಟಕ ರಾಜ್ಯ ಸಹರಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪತ್ತಿನ ಹಾಗೂ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯ ಕ್ರಮ ವನ್ನು ಶನಿವಾರ ಉಡುಪಿ ಲಿಕೋ ಬ್ಯಾಂಕಿನ ಡೈಮಂಡ್ ಜ್ಯುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಸಹಕಾರಿ ಕ್ಷೇತ್ರದ ಭವಿಷ್ಯ ರೂಪಿಸುವ ಕೆಲಸ ಜಿಲ್ಲೆಯ ಸಹಕಾರಿಗಳಿಂದ ಆಗುತ್ತಿರುವುದು ಹೆಮ್ಮೆಯ ವಿಚಾರ. ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ತಂದು ಜನರ ವಿಶ್ವಾಸ ಗಳಿಸಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಕೆಲಸವನ್ನು ಮಾಡುತ್ತಿದೆ. ಸಾಕಷ್ಟು ಬದಲಾವಣೆ ತರುವ ಕೆಲಸ ಆಗುತ್ತಿದೆ. ಸಹಕಾರಿಗಳು ಒಗ್ಗಟ್ಟಿನಿಂದ ಮುನ್ನಡೆಯುತ್ತಿರುವ ಕಾರಣದಿಂದ ಉಡುಪಿ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸಾಕಷ್ಟು ಯಶಸ್ಸು ಕಾಣುತ್ತಿದೆ. ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ ರಾಜಕೀಯ ರಹಿತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ರಾಜ್ಯ ಸರಕಾರವು ವಿಧಾನ ಪರಿಷತ್‌ನಲ್ಲಿ ಮಂಡಿಸಿದ ಉದ್ದೇಶಿತ ತಿದ್ದುಪಡಿ ಠೇವಣಿ ವಿಯೋಗ ಕುರಿತ ವಿಧೇಯಕ ಜಾರಿಗೆ ಬಂದರೆ ಸಹಕಾರಿ ಕ್ಷೇತ್ರಗಳ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು. ಆದರೆ, ಸರಕಾರದ ನೀತಿಗಳ ಬಗ್ಗೆ ನಮಗೆ ಯಾವುದೇ ವಿರೋಧ ಇಲ್ಲ ಎಂದರು.
ಲಿಕೋ ಬ್ಯಾಂಕಿನ ಅಧ್ಯಕ್ಷ ಕೃಷ್ಣ, ಉಡುಪಿ ಟೌನ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ, ಯೂನಿಯನ್ ನಿರ್ದೇಶಕ ರಾದ ಎಚ್.ಗಂಗಾಧರ ಶೆಟ್ಟಿ, ಶ್ರೀಧರ್ ಪಿ.ಎಸ್., ಕೆ.ಸುರೇಶ್ ರಾವ್ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಿವಮೊಗ್ಗ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್, ‘ಸಹಕಾರ ಕಾಯ್ದೆಯ ಪ್ರಮುಖ ಅಂಶಗಳು’ ಹಾಗೂ ‘ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವಂತೆ ಪ್ರೋಪೆಷನಲ್ ಟಾಕ್ಸ್’ ಮತ್ತು ಬೆಂಗಳೂರು ಸನ್ನದು ಲೆಕ್ಕಪರಿಶೋಧಕ ಅನಿಲ್ ಭಾರದ್ವಾಜ್ ‘ಸಹಕಾರ ಸಂಸ್ಥೆಗಳಿಗೆ ಅನ್ವಯಿಸು ವಂತೆ ಜಿಎಸ್‌ಟಿ ತೆರಿಗೆ ಕಾನೂನುಗಳು, ಆದಾಯ ತೆರಿಗೆ ಕಾಯ್ದೆ ಅಂಶಗಳು ಹಾಗೂ ಅನುಪಾಲನ ಕ್ರಮಗಳು’ ಉಪನ್ಯಾಸ ನೀಡಿದರು.







