ವಿಶ್ವದಾಖಲೆಗಾಗಿ ದೀಕ್ಷಾ ವಿ. ಭರತನಾಟ್ಯ ಮೂರನೇ ದಿನಕ್ಕೆ

ಉಡುಪಿ, ಆ.23: ನಿರಂತರವಾಗಿ 216 ಗಂಟೆಗಳ ಕಾಲ ಭರತನಾಟ್ಯ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಯಲು ಹೊರಟ ವಿದುಷಿ ದೀಕ್ಷಾ ವಿ. ಇವರ ನೃತ್ಯ ಪ್ರದರ್ಶನ ಇಂದು ಮೂರನೇ ದಿನ ಮುಂದುವರಿದಿದೆ.
ಆ.21ರಂದು ಅಪರಾಹ್ನ 3 ಗಂಟೆಗೆ ಪ್ರಾರಂಭಗೊಂಡ ಭರತನಾಟ್ಯ ಪ್ರದರ್ಶನ ಆ.30ರವರೆಗೆ ನಿರಂತರ 216 ಗಂಟೆಗಳ ಕಾಲ ನಡೆಯಲಿದೆ. ಅಜ್ಜರಕಾಡಿನಲ್ಲಿರುವ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಸಭಾಂಗಣ ದಲ್ಲಿ ನಡೆದಿರುವ ಈ ನೃತ್ಯ ಪ್ರದರ್ಶನವನ್ನು ಇಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವೀಕ್ಷಿಸಿ ಶುಭಹಾರೈಸಿದರು.
ಡಾ.ಪರಮೇಶ್ವರ್ ಅವರೊಂದಿಗೆ ಮಾಜಿ ಶಾಸಕ ಕೆ.ರಘುಪತಿ ಭಟ್, ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಮಹೇಶ್ ಠಾಕೂರ್ ಜೊತೆಗಿದ್ದರು.
‘ನವರಸ ದೀಕ್ಷಾವೈಭವಂ’ ಎಂಬ ಹೆಸರಿನಡಿ ಮಣಿಪಾಲದ ರತ್ನ ಸಂಜೀವ ಕಲಾಮಂಡಲ ಈ ವಿಶ್ವದಾಖಲೆಯ ನೃತ್ಯ ಪ್ರದರ್ಶನವನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ಕೆ.ರಘುಪತಿ ಭಟ್ ಅವರು ಉದ್ಘಾಟಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಸಾಧನೆಗೆ ಧೈರ್ಯ ಮತ್ತು ಸಂಕಲ್ಪ ಬೇಕು. ವಿದುಷಿ ದೀಕ್ಷಾ ಅವರ ಸಂಕಲ್ಪಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ದೀಕ್ಷಾ ಅವರ ಕಲಾಗುರುಗಳಾದ ವಿದ್ವಾನ್ ಶ್ರೀಧರ್ ರಾವ್ ಶಿಷ್ಯೆಯ ಪ್ರಯತ್ನಕ್ಕೆ ಶುಭ ಕೋರಿದರು. ಈ ಸಂದರ್ಭ ದಲ್ಲಿ ಗೀತಾಂಜಲಿ ಸುವರ್ಣ, ಬಿ.ಎನ್.ಶಂಕರ ಪೂಜಾರಿ, ವಿ.ಉಷಾ ಹೆಬ್ಬಾರ್, ವಿ.ವೀಣಾ ಸಾಮಗ, ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಉಪಸ್ಥಿತರಿದ್ದರು.
ಭರತನಾಟ್ಯದ ಮೂಲಕ ಸಾಧನೆ ಮಾಡಬೇಕೆನ್ನುವುದು ನನ್ನ ಗುರಿಯಾಗಿದ್ದು, ಗುರುಗಳು, ಹೆತ್ತವರು, ಸಹಪಾಠಿ ಗಳು ಹಾಗೂ ಹಿರಿಯರ ಸಹಕಾರ, ಬೆಂಬಲ ಮತ್ತು ಆಶೀರ್ವಾದಗಳಿಂದ ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ದೀಕ್ಷಾ ವಿ.ನುಡಿದರು.
ರೆಮೋನಾ ದಾಖಲೆ ಮುರಿಯಲು ಪ್ರಯತ್ನ: ಕಳೆದ ತಿಂಗಳು ಮಂಗಳೂರಿನಲ್ಲಿ ರೆಮೋನಾ ಎವೆಟ್ ಪಿರೇರಾ ಅವರು 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಬರೆದ ದಾಖಲನೆಯನ್ನು ಮುರಿಯಲು ವಿದುಷಿ ದೀಕ್ಷಾ ಪ್ರಯತ್ನಿಸುತಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮುಂಡ್ಕಿನಜೆಡ್ಡಿನ ವಿದುಷಿ ದೀಕ್ಷಾ ವಿ. ಭರತನಾಟ್ಯದಲ್ಲಿ ವಿಶೇಷ ಪ್ರೀತಿ ಹಾಗೂ ಆಸಕ್ತಿಯನ್ನು ಹೊಂದಿದ್ದಾರೆ. ಕಲೆಯಲ್ಲಿ ವಿಶೇಷ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿ ದ್ದಾರೆ. ಬಹುಮುಖ ಪ್ರತಿಭೆಯ ವಿದುಷಿ ದೀಕ್ಷಾ ಭರತನಾಟ್ಯವನ್ನಲ್ಲದೇ, ಯಕ್ಷಗಾನ, ವೀಣೆ, ಚಂಡೆ, ಮದ್ದಳೆ, ಚಿತ್ರಕಲೆ ಸಹಿತ ಅನೇಕ ಪ್ರಕಾರಗಳಲ್ಲಿ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ಈಗಾಗಲೇ ಮೆರೆದಿದ್ದಾರೆ.







