ಸಾಂಪ್ರದಾಯಿಕ ಶೃಂಗಾರ ಪ್ರದರ್ಶನ ‘ಸಿಂಗಾರ ಸಿರಿ’ ಉದ್ಘಾಟನೆ

ಉಡುಪಿ, ಆ.24: ದೈವಿಕ ಸೌಂದರ್ಯ ಹೆಚ್ಚಿಸುವ ಪ್ರಯತ್ನ ನಡೆದರೆ ಸಂಸ್ಕೃತಿ ಉಳಿಯಲು ಸಾಧ್ಯ. ದೈವಿಕ ಸೌಂದರ್ಯದ ಪ್ರಚಾರ ಹೆಚ್ಚು ನಡೆಯಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀಪುತ್ತಿಗೆ ಮಠ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ರವಿವಾರ ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಭಾರತದ ವಿವಿಧ ರಾಜ್ಯದ ಮದುಮಕ್ಕಳ ಸಾಂಪ್ರದಾಯಿಕ ಶೃಂಗಾರ ಪ್ರದರ್ಶನ ‘ಸಿಂಗಾರ ಸಿರಿ’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಾಚೀನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಇದಕ್ಕೆ ವಿರುದ್ಧ ನಡೆದರೆ ತಾತ್ಸಾರದ ಭಾವನೆ ಬರಬಹುದು. ತಜ್ಞೆಯರು ಸೌಂದರ್ಯಕ್ಕೆ ಸರಿಯಾದ ವ್ಯಾಖ್ಯಾನ ನೀಡಬೇಕು. ಇದರಿಂದ ಸಮಾಜಕ್ಕೆ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ನಂದಾ ಶೆಟ್ಟಿ ಅಧ್ಯಕ್ಷತೆ ಮಾತನಾಡಿ, ಪಾಶ್ಚಾತ್ಯ ಸಂಸತಿ, ಉಡುಗೆ ತೊಡುಗೆಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಯನ್ನು ಭಾರತೀಯ ಅಲಂಕಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಮದುಮಕ್ಕಳ ಶೃಂಗಾರವನ್ನೇ ಬದುಕಾಗಿಸಿಕೊಂಡ ಮಹಿಳಾ ಸೌಂದರ್ಯ ತಜ್ಞೆಯರಿಗೆ ಇದರಿಂದ ವಿಶೇಷ ಅವಕಾಶಗಳು ಲಭಿಸುವ ಆಶಯ ಹೊಂದಿದ್ದೇವೆ ಎಂದರು.
ಪುತ್ತಿಗೆ ಕಿರಿಯ ಶ್ರೀಸುಶೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನ, ಕಾರ್ಯದರ್ಶಿ ಸಂಧ್ಯಾ ದಿನೇಶ್, ಕೋಶಾಧಿಕಾರಿ ಗೀತಾ ದಯಾನಂದ, ಸ್ಥಾಪಕ ಅಧ್ಯಕ್ಷೆ ಮರಿಯಾ ಹೆರಾಲ್ಡ್, ಸ್ಥಾಪಕ ಕಾರ್ಯದರ್ಶಿ ವೇದಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.







