ಬಾಹ್ಯಾಕಾಶ ಕೌತುಕಗಳ ಆಗರ: ಡಾ.ಅಶೋಕ್ ಕಾಮತ್

ಉಡುಪಿ, ಆ.24: ಬಾಹ್ಯಾಕಾಶ ಎಂಬುದು ಕೌತುಕಗಳ ಆಗರವಾಗಿದ್ದು, ಚಂದ್ರ ಸೂರ್ಯ ಮತ್ತಿತರ ಆಕಾಶ ಕಾಯಗಳ ಅಧ್ಯಯನವನ್ನು ವಿಜ್ಞಾನಿಗಳು ನಡೆಸುತ್ತಲೇ ಬಂದಿರುತ್ತಾರೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ದೇಶದ ಸಾಧನೆ ಯನ್ನು ಸಂಭ್ರಮಿಸುವುದರೊಂದಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ ಎಂದು ಉಡುಪಿ ಡಯೆಟ್‌ನ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ಹಿರಿಯಡ್ಕದ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ನಡೆದ ರಾಷ್ಟೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆ ಗಣನೀಯವಾಗಿದ್ದು, ವಿಕ್ರಂ ಸಾರಾಭಾಯಿ, ಹೋಮೀಜಿ ಬಾಬಾ, ಯು.ಆರ್.ರಾವ್ ಮುಂತಾದ ಸಾಧಕರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವಿಜ್ಞಾನಿ ವಿಕ್ರಂ, 2023ರ ಆಗಸ್ಟ್ 23ರಂದು ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ಸ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಕಾರ್ಯಚರಿಸಿದ ಚಂದ್ರಯಾನ-3ರ ಯಶಸ್ಸನ್ನು ಸ್ಮರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾಹೆಯ ನಿವೃತ್ತ ಪ್ರೊಫೆಸರ್ ವ್ಯಾಸ ಉಪಾಧ್ಯಾಯ ಹಾಗೂ ಪಿ.ಪಿ.ಸಿಯ ಸಹಾಯಕ ಪ್ರಾಧ್ಯಾಪಕ ಚವನ್ ಹೆಗಡೆ ದಿನದ ವಿಶೇಷತೆಯ ಕುರಿತು ಮಾಹಿತಿ ನೀಡಿದರು.
ಶಾಲೆಯ ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವ್ಯ ಎಸ್., ಪ್ರಭಾರ ಪ್ರಾಂಶುಪಾಲೆ ವೀಣಾ ನಾಯಕ್, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.







