ಕೊಂಕಣ ರೈಲ್ವೆ: ರತ್ನಗಿರಿಯಲ್ಲಿ ರೈಲ್ವೆ ಜಿಪಿಆರ್ ಉದ್ಘಾಟನೆ

ಉಡುಪಿ, ಆ.25: ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷೆ ಹಾಗೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಜಿಪಿಆರ್ (ಸರಕಾರಿ ರೈಲ್ವೆ ಪೊಲೀಸ್) ಪೊಲೀಸ್ ಸ್ಟೇಶನ್‌ನ್ನು ಸೋಮವಾರ ರತ್ನಗಿರಿ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟಿಸಲಾಯಿತು.
ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂತೋಷ ಕುಮಾರ್ ಝಾ ಅವರ ಉಪಸ್ಥಿತಿಯಲ್ಲಿ ಮಹಾರಾಷ್ಟ್ರ ಜಿಪಿಆರ್‌ನ ಮಹಾ ನಿರ್ದೇಶಕ ಪ್ರಶಾಂತ್ ಬುರುಡೆ ಅವರು ಜಿಪಿಆರ್ ಸ್ಟೇಶನ್‌ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರತ್ನಗಿರಿಯ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ಬಗಾಟೆ, ರತ್ನಗಿರಿಯ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಶೈಲೇಶ್ ಬಾಪಟ್, ರೈಲ್ವೆ ಪೊಲೀಸ್‌ನ ಡಿಸಿ ಪ್ರಜ್ಞಾ ಜಿಗೆ, ರೈಲ್ವೆ ಪೊಲೀಸ್‌ನ ಎಸಿ ನಿಲೀಮಾ ಕುಲಕರ್ಣಿ ಹಾಗೂ ಪೊಲೀಸ್ ನಿರೀಕ್ಷಕ ಪ್ರವೀಣ್ ಪಡ್ವೆ ಉಪಸ್ಥಿತರಿದ್ದರು.
ಸದ್ಯಕ್ಕೆ ಇಲ್ಲಿ 50 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ 109 ಮಂದಿ ಹೋಮ್ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವರು ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಭದ್ರತೆ ಹಾಗೂ ಸುರಕ್ಷತೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.





