ರಸ್ತೆ ತೆರವು ಕಾರ್ಯ: ಹಟ್ಟಿಯಂಗಡಿ ಪಿಡಿಓ ಕರ್ತವ್ಯಕ್ಕೆ ಅಡ್ಡಿ; ಪ್ರಕರಣ ದಾಖಲು

ಕುಂದಾಪುರ, ಆ.26: ರಸ್ತೆ ತೆರವು ಕಾರ್ಯ ನಡೆಸುತ್ತಿದ್ದ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ ಕವಡೇಕರ್(42) ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಕನ್ಯಾನ ಗ್ರಾಮದ ಗಾಣಿಗರ ಕೇರಿಗೆ ಹೋಗುವ ರಸ್ತೆಯಲ್ಲಿ ಸಿಂಗಾರಿ ಗಾಣಿಗ ಕಡೆಯವರು ತಡೆ ಉಂಟು ಮಾಡಿದ್ದು ಈ ರಸ್ತೆ ತಕರಾರಿನ ವಿಚಾರದಲ್ಲಿ ಸಿಂಗಾರಿ ಗಾಣಿಗ ಕಡೆಯವರು ಹೈಕೋರ್ಟಿನಲ್ಲಿ ದಾವೆ ದಾಖಲಿಸಿದ್ದರು. ಈ ದಾವೆಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೇ 21 ದಿನಗಳವರೆಗೆ ಯಥಾಸ್ಥಿತಿ ಕಾಪಾಡುವಂತೆ ಹಾಗೂ ಗ್ರಾಮಸ್ಥರ ದೂರಿನಂತೆ ರಸ್ತೆಗೆ ಅಡ್ಡಪಡಿಸಿರುವುದನ್ನು ತೆರವುಗೊಳಿ ಸಲು ನ್ಯಾಯಾಲಯ ಆದೇಶ ನೀಡಿದೆ.
ಅದರಂತೆ ಆ.25ರಂದು ಗ್ರಾಪಂನಲ್ಲಿ ರಸ್ತೆ ತೆರವು ಕಾರ್ಯ ಕಾಮಗಾರಿ ನಡೆಸಲು ನಿರ್ಣಯ ತೆಗೆದುಕೊಂಡು ಪೊಲೀಸ್ ಭದ್ರತೆಯಲ್ಲಿ ರಸ್ತೆ ತೆರವು ಕಾರ್ಯ ಮಾಡಲಾಗುತ್ತಿತ್ತು. ಆಗ ಸಿಂಗಾರಿ ಗಾಣಿಗ, ಸುರೇಶ ಗಾಣಿಗ, ಸುಮಿತ್ರಾ, ಗೌತಮಿ, ರಾಘವೇಂದ್ರ, ಚೈತ್ರ ಗುಂಪು ಕಟ್ಟಿಕೊಂಡು ಬಂದು ತೆರವು ಕಾರ್ಯಕ್ಕೆ ಅಡ್ಡಿ ಪಡಿಸಿದರು. ಕೆಲವು ಮಹಿಳೆಯರು ರಸ್ತೆಗೆ ಅಡ್ಡ ಮಲಗಿದ್ದು ಹಾಗೂ ಕೆಲವರು ಅಡ್ಡ ನಿಂತು ಪಿಡಿಓ ಮಂಜುನಾಥ ಕವಡೇಕರ್ ನಿರ್ವಹಿಸುತ್ತಿದ್ದ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.







