ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಬೆಳ್ವೆ ಸತೀಶ್ ಕಿಣಿ ಅವಿರೋಧ ಆಯ್ಕೆ

ಬ್ರಹ್ಮಾವರ, ಆ.29: ಕರಾವಳಿ ಭಾಗದಲ್ಲಿರುವ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬೆಳ್ವೆ ಸತೀಶ ಕಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಪಿಗೇಡಿ ಸಂಜೀವ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಇಲ್ಲಿ ಕಾರ್ಖಾನೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರಿ ಸಂಘಗಳ ಉಪ ನಿಬಂಧಕ ಕಚೇರಿ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿಎಂ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಿಕೊಟ್ಟರು.
ಬೆಳ್ವೆ ಸತೀಶ್ ಕಿಣಿ ಅವರು ವಿಧಾನಪರಿಷತ್‌ನ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇತ್ತೀಚೆಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ರೈತರ ಸಂಘದ ಬೆಂಬಲಿತ ಗುಂಪು ಸಂಪೂರ್ಣ ಬಹುಮತ ಪಡೆದಿತ್ತು.
ಇದೇ ರೈತ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಸಕ್ಕರೆ ಕಾರ್ಖಾನೆಯಲ್ಲಿ ಹಿಂದಿನ ಆಡಳಿತ ಮಂಡಳಿಯಿಂದ ನಡೆದಿದೆ ಎನ್ನಲಾದ ಗುಜರಿ ಮಾರಾಟದಲ್ಲಿ 13.92 ಕೋಟಿ ರೂ.ಗಳ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಕಳೆದ ಫೆಬ್ರವರಿ ತಿಂಗಳಲ್ಲಿ 50 ದಿನಗಳ ಧರಣಿ ಮುಷ್ಕರ ನಡೆಸಲಾಗಿತ್ತು. ಪ್ರತಿಭಟನಕಾರರ ಬೇಡಿಕೆಗೆ ಸರಕಾರ ಸಮ್ಮತಿಸಿದ ಬಳಿಕ ಹೋರಾಟವನ್ನು ಹಿಂದೆಗೆದುಕೊಳ್ಳಲಾಗಿತು. ಹಗರಣದ ತನಿಖೆ ಇದೀಗ ಅಂತಿಮ ಹಂತದಲ್ಲಿದೆ.
ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ನಿರ್ದೇಶಕರಾದ ಭುಜಂಗ ಶೆಟ್ಟಿ ಬ್ರಹ್ಮಾವರ, ಕೆದೂರು ಸದಾನಂದ ಶೆಟ್ಟಿ, ಹೆಚ್. ಹರಿಪ್ರಸಾದ್ ಶೆಟ್ಟಿ, ಮಂಜುನಾಥ್ ಗಿಳಿಯಾರು, ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ರಂಗನಾಯಕ, ಶಿವರಾಮ್ ಹಾಲಾಡಿ, ಭೋಜ ಕುಲಾಲ್ ಬೆಳಂಜೆ, ಚೈತ್ರ ಅಡಪ, ಗಿರಿಜಾ ಪೂಜಾರ್ತಿ ಅಮಾಸೆಬೈಲು ಉಪಸ್ಥಿತರಿದ್ದರು.







