ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ಸಾಧ್ಯ: ಸಂಸದ ಕೋಟ

ಉಡುಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಕ್ಷಮತೆ ಸಾಧ್ಯ. ಕ್ರೀಡೆಯಿಂದ ಕ್ರಿಯಾ ಶೀಲರಾಗಿರುವುದರಿಂದ ಸದೃಢ ಬದುಕು ಕಟ್ಟಿಕೊಳ್ಳಲು ಸಹಕಾರಿ. ಆದ್ದರಿಂದ ಯುವ ಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.
ಶುಕ್ರವಾರ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಲಯನ್ಸ್ ಕ್ಲಬ್ ಉಡುಪಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ - ಕುಂದಾಪುರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೇಜರ್ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕೋಟ, ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟಿದ ದಿನವನ್ನು ಇಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾ ಗುತ್ತಿದೆ. ಯುವಜನತೆ ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಇಂದಿನ ಯುವಪೀಳಿಗೆ ಕಲಿಕೆಯ ಜೊತೆಜೊತೆಗೆ ಧ್ಯಾನ್‌ಚಂದ್ ರಂತೆ ಉತ್ತಮ ಕ್ರೀಡಾ ಮನೋಭಾವ, ಸಂಯಮ, ಆತ್ಮವಿಶ್ವಾಸದ ದೃಢನಿರ್ಧಾರವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಜಯಕರ ಶೆಟ್ಟಿ ರಕ್ತದಾನದ ಮಹತ್ವದ ಕುರಿತು ಮಾತನಾಡಿ, ಭಾರತದ ಶ್ರೇಷ್ಠ ಕ್ರೀಡಾಪಟು ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ನೆನಪಿಗಾಗಿ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿ ರುವುದು ಪ್ರಶಂಸಾರ್ಹ ವಿಷಯ.ಜೀವಜಲವಾದ ರಕ್ತವನ್ನು ದಾನ ಮಾಡುವ ಕಾರ್ಯದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದರು.
ಶಾಸಕ ಯಶ್‌ಪಾಲ್ ಎ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸದ್ ಖೇಲ್ ಮಹೋತ್ಸವ್ ವೆಬ್‌ಸೈಟ್‌ನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ, ತೆಂಕನಿಡಿಯೂರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







