ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನ: ಎಸ್‌ಎಂವಿಐಟಿಎಂ ಸಾಧನೆ

ಉಡುಪಿ, ಆ.30: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯ ನವಳೆಯ ಜವಾಹರಲಾಲ್ ನೆಹರು ನ್ಯೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನ ಯುಗ್ಮ ಟೆಕ್‌ಫೆಸ್ಟ್ 1.0ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದ ಈ ತಾಂತ್ರಿಕ ಉತ್ಸವವು, ಸೃಜನಶೀಲತೆ ಹಾಗೂ ತಾಂತ್ರಿಕತೆಯ ಪ್ರದರ್ಶನಕ್ಕೆ ಒತ್ತಾಸೆಯಾದ ವೇದಿಕೆಯಾಗಿದ್ದು, ಎಸ್‌ಎಂವಿಟಿಎಂನ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹಾಗೂ ತಂಡಗಳ ಸಾಮರ್ಥ್ಯದಿಂದ ಪೈಪೋಟಿಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ವಿದ್ಯಾರ್ಥಿಗಳಾದ ಶಿವಂ, ಪೂರ್ಣನಂದ, ಶ್ರೇಯಾ ನಾಯ್ಕ್ ಮತ್ತು ಶಿವಾನಿ ಸಾಲಿಯಾನ್‌ಗೆ ಹ್ಯಾಕ್ ಯುಗ್ಮ 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ಶಿವಂ ಮತ್ತು ಚೇತನ ಕೋಟ್ಯಾನ್‌ಗೆ ಯುಐ/ಯುಎಕ್ಸ್ ಡಿಸೈನ್ ಸ್ಪ್ರಿಂಟ್‌ನಲ್ಲಿ ಪ್ರಥಮ ಸ್ಥಾನ, ಅಮೃತ ಮತ್ತು ಶ್ರೇಯ ಎಸ್.ನಾಯ್ಕ್‌ಗೆ ಐಡಿಯಾಥಾನ್‌ನಲ್ಲಿ ಎರಡನೇ ಸ್ಥಾನ ಹಾಗೂ ತೇಜಸ್ ನಾಯ್ಕ್ ಮತ್ತು ಸ್ವಸ್ತಿಕ್ ಯಶ್‌ಗೆ ಟ್ರೆಜರ್ ಹಂಟ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.





