ಅಂಬಲಪಾಡಿ ಅಪಘಾತ: ಪ್ರಾಧಿಕಾರ, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು

ಉಡುಪಿ, ಸೆ.2: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರ ಹಾಗೂ ಲಾರಿ ಚಾಲಕನ ವಿರುದ್ಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿ ಬೈಪಾಸ್ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ಹೋಗುತ್ತಿದ್ದ ಲಾರಿಯು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ದೆಂದೂರುಕಟ್ಟೆಯ ಪ್ರದೀಪ್ ಕುಮಾರ್(33) ಎಂಬವರು ಲಾರಿಯ ಚಕ್ರದಡಿಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಈ ಅಫಘಾತಕ್ಕೆ ಅಂಬಲಪಾಡಿ ಜಂಕ್ಷನ್ ಬಳಿ ಪ್ಲೈ-ಓವರ್ ಕಾಮಗಾರಿ ನಡೆಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿದ್ದ ಕಾರ್ಲ ಕನ್‌ಸ್ಟ್ರಕ್ಷನ್ ಗುತ್ತಿಗೆದಾರರು ನಿರ್ಲಕ್ಷ್ಯ ಮಾಡಿರುವುದರಿಂದ ಸರ್ವಿಸ್ ರಸ್ತೆಯಲ್ಲಿರುವ ಹೊಂಡಗಳನ್ನು ದುರಸ್ತಿ ಮಾಡಿಲ್ಲ. ಇದರಿಂದ ಲಾರಿಯು ಕಾಮಗಾರಿ ನಡೆಯುವ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಬೈಕಿಗೆ ಢಿಕ್ಕಿ ಹೊಡೆದಿರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.







