ದೇಶದ ರಾಜಕಾರಣದಲ್ಲಿ ಬದಲಾವಣೆ ಗಾಳಿ: ಐವನ್ ಡಿಸೋಜ

ಉಡುಪಿ, ಸೆ.6: ಪ್ರಸ್ತುತ ದೇಶದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಹುಲ್ ಗಾಂಧಿ ಅವರು ದೇಶದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ರೀತಿಯಿಂದ ಹೆಚ್ಚು ಹೆಚ್ಚು ಜನರು ರಾಹುಲ್ ಮುಖಂಡತ್ವ ವನ್ನು ಒಪ್ಪಿ ಕೊಂಡು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಆದ ಐವನ್ ಡಿ’ಸೋಜ ಅಭಿಪ್ರಾಯಪಟ್ಟಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡುತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ಜನತೆಗೆ ಪಕ್ಷದ ಮೇಲೆ ವಿಶ್ವಾಸ ಮೂಡುವಂತೆ ಮಾಡಬೇಕು ಎಂದವರು ಸಲಹೆ ನೀಡಿದರು.
ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯಕುಮಾರ ಸೊರಕೆ ಮಾತನಾಡಿ, ದೇಶದೆಲ್ಲೆಡೆ ಮತಗಳ್ಳತನದ ಆತಂಕದಿಂದ ರಾಜ್ಯ ಸರಕಾರ ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ನಿರ್ಧಾರ ಕೈಗೊಂಡಿದೆ.ಈ ನಿರ್ಧಾರಕ್ಕೆ ಚುನಾವಣಾ ಆಯೋಗವೂ ಸ್ಪಂದಿಸಿರುವುದು ಮಹತ್ತರವಾದ ಬೆಳವಣಿಗೆಯಾಗಿದೆ ಎಂದರು.
ದೇಶದ ಆಯ್ದ ಪ್ರದೇಶಗಳಲ್ಲಿ ಹೆಚ್ಚುವರಿ ಮತಗಳು ಸೇರ್ಪಡೆ ಗೊಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆ ಆದರೆ ಇದರ ಷಡ್ಯಂತ್ರ ಹೊರ ಬರುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಚುನಾವಣಾ ಆಯೋಗ ಸ್ಪಂದಿಸಿದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು ಎಂದವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದಾಗ ಗ್ರಾಮಮಟ್ಟದಲ್ಲಿ ಪಕ್ಷ ಬೆಳವಣಿಗೆ ಆಗುತ್ತದೆ. ಹಾಗೂ ಮುಖಂಡತ್ವ ಹೊರಹೊಮ್ಮಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಸೊರಕೆ ಹೇಳಿದರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಾದ ಲೀಲಾವತಿ ಡಿ.ನಾಯಕ್, ಕನರಾಡಿ ಮಾರ್ನೆ ಹಾಗೂ ರಾಮಚಂದ್ರ ಟಿ. ಭಟ್ ಯಲ್ಲಾಪುರ ಇವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಪ್ರಾಸ್ತಾವಿಕ ಮಾತುಗಳನ್ನಾಡಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಲು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಗೋಪಾಲ್ ಪೂಜಾರಿ, ರಾಜು ಪೂಜಾರಿ, ದಿನೇಶ್ ಹೆಗಡೆ ಮೊಳಹಳ್ಳಿ, ಬಿ.ಭುಜಂಗ ಶೆಟ್ಟಿ, ದಿನೇಶ್ ಪುತ್ರನ್, ಮಲ್ಯಾಡಿ ಶಿವರಾಮ್ ಶೆಟ್ಟಿ, ವಾಸುದೇವ ಯಡಿಯಾಳ್, ಬಿ.ನರಸಿಂಹಮೂರ್ತಿ, ಎ.ಹರೀಶ್ ಕಿಣಿ, ಕಾಪು ದಿವಾಕರ ಶೆಟ್ಟಿ, ಹರಿಪ್ರಸಾದ್ ಶೆಟ್ಟ್ವಿ, ರಮೇಶ್ ಕಾಂಚನ್, ಶಂಕರ್ ಕುಂದರ್, ಅರವಿಂದ್ ಪೂಜಾರಿ, ಗೋಪಿನಾಥ್ ಭಟ್, ವೈ. ಸುಕುಮಾರ್, ಶುಭೋದ್ ರಾವ್, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ ವಂಡ್ಸೆ ಪ್ರಶಾಂತ ಜತ್ತಣ್ಣ, ಪ್ರಖ್ಯಾತ ಶೆಟ್ಟಿ, ಮುರಲಿ ಶೆಟ್ಟ್ವಿ, ಡಾ.ಸುನಿತಾ ಶೆಟ್ಟ್ವಿ ರೋಶನಿ ಒಲಿವರಾ, ಜ್ಯೋತಿ ಪುತ್ರನ್, ಶಿವಾಜಿ ಸುವರ್ಣ,ಸೌರವ್ ಬಲ್ಲಾಳ್, ಮಹಾಬಲ ಕುಂದರ್, ಯತೀಶ್ ಕರ್ಕೇರ, ದಿವಾಕರ ಕುಂದರ್, ಶಬ್ಬೀರ್ ಅಹ್ಮದ್, ಬಿಪಿನ್‌ಚಂದ್ರ ಪಾಲ್ ನಕ್ರೆ, ಜಯಕುಮಾರ್, ಮಮತ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಶಶಿಧರ ಶೆಟ್ಟಿ ಎಲ್ಲೂರು, ಉಪೇಂದ್ರ ಮೆಂಡನ್, ಜಯಾನಂದ, ಹರಿಪ್ರಸಾದ್ ರೈ, ಸಂಜಯ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕುಶಲ ಶೆಟ್ಟಿ ಸ್ವಾಗತಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರೆ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.







