ಜೀವನವನ್ನು ಮಾದಕ ವಸ್ತುಗಳಿಗಾಗಿ ವ್ಯರ್ಥ ಮಾಡಬೇಡಿ: ಅಶೋಕ್

ಬ್ರಹ್ಮಾವರ, ಸೆ.6: ಯುವ ಜನಾಂಗ ಮಾದಕ ಪದಾರ್ಥಗಳಿಂದ ದೂರ ವಿದ್ದು, ಆರೋಗ್ಯಕರ ಸಮಾಜ ನಿರ್ಮಾ ಣಕ್ಕೆ ಪೂರಕವಾಗಿರಬೇಕು. ಜೀವನವೆಂಬುದು ನಿಮಗೆ ದೊರೆತ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಕ್ಷಣಿಕ ಸುಖಕ್ಕಾಗಿ ವ್ಯರ್ಥಗೊಳಿಸಬೇಡಿ ಎಂದು ಬ್ರಹ್ಮಾವರದ ಸಬ್ ಇನ್‌ಸ್ಪೆಕ್ಟರ್ ಅಶೋಕ್ ಮಲಬಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಚಾಂತಾರು ಬಸ್‌ನಿಲ್ದಾಣ ವಠಾರದಲ್ಲಿ ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಬ್ರಹ್ಮಾವರ ಪೊಲೀಸ್ ಠಾಣೆ, ಚಾಂತಾರು ಗ್ರಾಮ ಪಂಚಾಯತ್ ಹಾಗೂ ಕ್ರಾಸ್‌ಲ್ಯಾಂಡ್ ಕಾಲೇಜಿನ ಸಹಯೋಗದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಿಗೆ, ಮುಖ್ಯವಾಗಿ ಯುವ ಜನಾಂಗಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದವರು ತಿಳಿಸಿದರು.
ಮಾದಕ ವ್ಯಸನದಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ತೊಂದರೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಯುವ ಜನಾಂಗ ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನವನ್ನು ನಡೆಸಲು ಪ್ರೋತ್ಸಾಹಿಸು ವುದು ಇದರ ಉದ್ದೇಶವಾಗಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಸಹಕರಿಸಿ, ಮಾದಕ ದ್ರವ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಜನರನ್ನು ಪ್ರೋತ್ಸಾಹಿಸಿದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು ಅಶೋಕ್ ಹೇಳಿದರು.
ಸಹಾಯಕ ಸಬ್ ಇನ್‌ಸ್ಪೆಕ್ಟರ್ ವಿಠಲ್ ಎಂ. ಅವರು ಮಾದಕ ಪದಾರ್ಥ ಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಜಾಗೃತಿಯ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಯುವ ಪೀಳಿಗೆ ಜಾಗೃತಗೊಂಡಾಗ ಮಾತ್ರ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕೆ ಯುವ ಜನತೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.
ಗಮನ ಸೆಳೆದ ಬೀದಿ ನಾಟಕ: ಕ್ರಾಸ್‌ಲ್ಯಾಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕ, ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗೂ ವಿದ್ಯಾರ್ಥಿ ಸಂಘಗಳ ಸದಸ್ಯರು ಮಾದಕ ವ್ಯಸನದಿಂದ ಯುವ ಜನತೆ ಹೇಗೆ ದಾರಿ ತಪ್ಪುತ್ತಾರೆ, ಅದರಿಂದ ಹೇಗೆ ಮುಕ್ತರಾಗಬಹುದು ಎನ್ನುವ ಬಗ್ಗೆ ಪ್ರದರ್ಶಿಸಿದ ಬೀದಿ ನಾಟಕ/ಮೈಮ್ ಶೋ ಸಾರ್ವಜನಿಕರ ಗಮನ ಸೆಳೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್ ಕ್ಲೈವ್ ಅಧ್ಯಕ್ಷತೆ ವಹಿಸಿದ್ದರು. ಚಾಂತಾರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ, ಸುರೇಶ್, ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಸಮಿತಿಯ ಸಂಚಾಲಕ ಬಿಜು ಜೇಕಬ್, ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಸುಕುಮಾರ್ ಶೆಟ್ಟಿಗಾರ್, ಅಶ್ವಿನಿ, ಕಲಾ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕಿ ಸುಮಿತ್ರ ಮತ್ತು ರೂಪ, ವಿದ್ಯಾರ್ಥಿ ಸಂಘದ ಸಂಚಾಲಕಿ ದೀಪಾ ಕಿತ್ತೂರು, ರೆಡ್‌ಕ್ರಾಸ್ ಘಟಕದ ನವೀನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಸತ್ಯವತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬರ್ನಿಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.







