ಪ್ರಯಾಣಿಕ ಮರೆತ ಬ್ಯಾಗ್‌ನ್ನು ಹಿಂದಿರುಗಿಸಿದ ಕೊಂಕಣ ರೈಲ್ವೆ ಸಿಬ್ಬಂದಿ

ಉಡುಪಿ, ಸೆ.11: ನಿಲ್ದಾಣಕ್ಕೆ ಬಂದ ರೈಲನ್ನು ಹತ್ತುವ ಅವಸರದಲ್ಲಿ ತನ್ನ ಬ್ಯಾಗ್‌ನ್ನು ನಿಲ್ದಾಣದಲ್ಲೇ ಮರೆತ ಪ್ರಯಾಣಿಕರೊಬ್ಬರ ನಗದು ಸೇರಿದಂತೆ ದಾಖಲೆಗಳಿದ್ದ ಬ್ಯಾಗ್‌ನ್ನು ಕೊಂಕಣ ರೈಲ್ವೆಯ ಆರ್‌ಪಿಎಫ್ ಸಿಬ್ಬಂದಿ ಸುರಕ್ಷಿತವಾಗಿ ಹಿಂದಿರುಗಿಸಿದ ಘಟನೆ ಮಡಗಾಂವ್ ರೈಲು ನಿಲ್ದಾಣದಿಂದ ವರದಿಯಾಗಿದೆ.
ಭಟ್ಕಳ ತಾಲೂಕು ಮುರ್ಡೇಶ್ವರದ ರಾಜೇಶ್ ಮೋಹನ್ ಆಚಾರಿ ಎಂಬವರು ಸೆ.5ರಂದು ರೈಲು ನಂ.12779 ವಾಸ್ಕೋ-ಡ-ಗಾಮ- ಹಜರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲನ್ನು ಏರುವಾಗ ಬ್ಯಾಗ್‌ನ್ನು ನಿಲ್ದಾಣದಲ್ಲೇ ಮರೆತು ಬಿಟ್ಟಿದ್ದರು. ರೈಲು ಹೊರಟ ಬಳಿಕ ಅವರಿಗೆ ಬ್ಯಾಗ್‌ನ ನೆನಪಾಗಿ ತಕ್ಷಣ ರೈಲು ಸಹಾಯವಾಣಿ 139 (ರೈಲ್ ಮದದ್)ಕ್ಕೆ ಕರೆ ಮಾಡಿ ವಿಷಯ ತಿಳಿಸಿದರು.
ಅದೇ ದಿನ ಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಪವನ್ ಸಿಂಗ್ ಖತ್ರಿ ಅವರು ನಿಲ್ದಾಣದ ಹೊಸ ಸೇತುವೆ ಬಳಿ ಅನಾಥವಾಗಿದ್ದ ಬ್ಯಾಗ್‌ನ್ನು ಗಮನಿಸಿ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ರಾಜೇಶ್ ಆಚಾರಿ ಅವರು ಸೆ.9ರ ಮಂಗಳವಾರ ಗೋವಾದ ಮಡಗಾಂವ್ ನಿಲ್ದಾಣದಲ್ಲಿ ಆರ್‌ಪಿಎಫ್ ಪೋಸ್ಟ್‌ಗೆ ಬಂದು ತನ್ನ ಕಳೆದ ಬ್ಯಾಗ್ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದ ಸಿಬ್ಬಂದಿಗಳು ರಾಜೇಶ್ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿ, ದೂರುದಾರರ ಸಮ್ಮುಖದಲ್ಲಿ ಬ್ಯಾಗ್‌ನ್ನು ತೆರೆದು ಅದರಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದರು.
ಬ್ಯಾಗ್‌ನಲ್ಲಿ 10,000 ರೂ.ನಗದು, ಡ್ರೆಸ್‌ಗಳು, ಆಧಾರ ಕಾರ್ಡ್, ಆರ್‌ಸಿ ಕಾರ್ಡ್, ಲೈಸನ್ಸ್, ಪಾನ್ ಕಾರ್ಡ್ ಹಾಗೂ ಇತರ ವಸ್ತುಗಳಿದ್ದು, ಅವುಗಳು ರಾಜೇಶ್ ಅವರದೇ ಎಂದು ಖಚಿತ ಪಡಿಸಿಕೊಂಡ ಬಳಿಕ ಅವರಿಗೆ ಹಿಂದಿರುಗಿಸಲಾಯಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







