ಸಿಬ್ಬಂದಿ ತಂಡವಾಗಿ ಕಾರ್ಯಾಚರಿಸಿದರೆ ಅರಣ್ಯ ರಕ್ಷಣೆ ಸಾಧ್ಯ: ಸಿವರಾಮ್ ಬಾಬು

ಉಡುಪಿ, ಸೆ.11: ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಗಸ್ತು ಕಾರ್ಯಾಚರಣೆ ಮಾಡುವಾಗ ತಂಡವಾಗಿ ಮಾಡಬೇಕು. ಈ ಸಂದರ್ಭದಲ್ಲಿ ಬೇಕಾದ ಅಗತ್ಯ ಉಪಕರಣ ತೆಗೆದುಕೊಂಡು ಹೋಗಬೇಕು. ಇದರಿಂದ ಅರಣ್ಯ, ವನ್ಯಜೀವಿ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ಇದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ. ಹೇಳಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಸಹಯೋಗ ದೊಂದಿಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾರ್ಥ ಗುರುವಾರ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರಕಾರ ಎಲ್ಲ ಇಲಾಖೆಯ ಸಿಬ್ಬಂದಿಗಳಿಗೆ ಸಂಬಳ ಖಾತೆಯನ್ನು ತೆರೆಯಲು ಆದೇಶ ನೀಡಿದೆ. ಇದರಿಂದ 1ಕೋಟಿ ರೂ.ವರೆಗೆ ಜೀವವಿಮೆ ಕೂಡ ದೊರೆಯುತ್ತದೆ. ಹೊರಗುತ್ತಿಗೆ ನೌಕರರು ಕೂಡ ಸಂಬಳ ಖಾತೆಯನ್ನು ಮಾಡಬೇಕು. ಕುದುರೆಮುಖ ವನ್ಯಜೀವಿ ವಿಭಾಗದಿಂದ ಹೊರಗುತ್ತಿಗೆ ಸಿಬ್ಬಂದಿಗೆ 10ಲಕ್ಷ ರೂ. ಪೋಸ್ಟಲ್ ಇನ್ಸೂರೆನ್ಸ್ ಮಾಡಲಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಅರಣ್ಯ ಇಲಾಖೆಯವರು ಸಾಮಾಜಿಕ ಕಾರ್ಯ ಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹುತಾತ್ಮರ ಭವನ ನಿರ್ಮಿಸುವ ಅಗತ್ಯ ಇದೆ. ಇದರಿಂದ ಇಲಾಖೆಯವರು ಇನ್ನಷ್ಟು ಕಾರ್ಯ ಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಮಾತನಾಡಿ, ಕಡಿಮೆ ಪ್ರಮಾಣದಲ್ಲಿರುವ ಅರಣ್ಯ ಸಂಪತ್ತನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಹೆಚ್ಚಿನ ಒತ್ತಡ ಇದೆ. ಈ ರೀತಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಆದರೂ ಇಲಾಖೆಯ ಬಹಳಷ್ಟು ಮಂದಿ ಪ್ರಾಣವನ್ನು ಲೆಕ್ಕಿಸಿದರೆ ಅರಣ್ಯ ಸಂಪತ್ತು ಉಳಿಸಲು ತ್ಯಾಗ ಮಾಡಿದ್ದಾರೆ. ಅರಣ್ಯ ಸಂಪತ್ತನ್ನು ಕಾಪಾಡಲು ಸಾಕಷ್ಟು ಒತ್ತಡ ಇರುವುದರಿಂದ ಆ ನಿಟ್ಟಿನಲ್ಲಿಯೇ ಅರಣ್ಯ ಇಲಾಖೆಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮೂಡಬಿದ್ರಿ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಸಿದ್ದಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಜಿ.ಡಿ., ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಕಲ್ಯಾ ಸುರೇಶ್ ಶೆಣೈ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಚಿ ಅಂಪಾರು, ಜಿಲ್ಲಾ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ದೇವರಾಜ ಪಾಣ, ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿ ಸಂಘದ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿರಿದ್ದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ ವಹಿಸಿ ದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿ ಸ್ವಾಗತಿಸಿದರು. ಜಿಲ್ಲಾ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಕೇಶವ ಪೂಜಾರಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಗಸ್ತು ಅರಣ್ಯ ಪಾಲಕರ ಸಂಘದ ಖಜಾಂಚಿ ಸಂತೋಷ್ ಜೋಗಿ ವಂದಿಸಿದರು. ಒಟ್ಟು 155 ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.







