ಬ್ರಹ್ಮಶ್ರೀ ನಾರಾಯಣ ಗುರು -ರಾಣಿ ಅಬ್ಬಕ್ಕ ಜಯಂತಿ

ಕುಂದಾಪುರ, ಸೆ.13: ಬ್ರಹ್ಮಶ್ರೀ ನಾರಾಯಣ ಗುರುಗಳು ಶತಮಾನಕ್ಕೂ ಹಿಂದೆಯೇ ಕೇರಳದಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದ ದೇಶದ ಮೊದಲ ಸಂತರು. ತಮ್ಮ ವಿಚಾರಗಳ ಮೂಲಕವೇ ಸಮಾಜದ ಪರಿವರ್ತನೆಗೆ ಶ್ರಮಿಸಿದವರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ಬಿಜೆಪಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ರಾಣಿ ಅಬ್ಬಕ್ಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶತಮಾನದ ಹಿಂದೆ ಅಸ್ಪೃಶ್ಯತೆ, ಮಹಿಳಾ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ತಮ್ಮದೇ ಆದ ರೀತಿಯಲ್ಲಿ ನ್ಯಾಯ ಒದಗಿಸಿಕೊಟ್ಟ ಮಹನೀಯರು. ಅದೇ ರೀತಿ ರಾಣಿ ಅಬ್ಬಕ್ಕ ನೆಲಕ್ಕಾಗಿ ಹೋರಾಡಿದ ಮಹಿಳೆಯರಲ್ಲಿ ಕರ್ನಾಟಕದ ಮುಂಚೂಣಿ ಮಹಿಳೆ. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ನಾರಾಯಣ ಗುರುಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರುವ ವ್ಯಕ್ತಿಯಲ್ಲ. ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಲು ತಮ್ಮದೇ ಆದ ದಾರಿಯಲ್ಲಿ ಸಂಘಟಿಸಿದವರು. ವಿದ್ಯೆಯಿಂದ ಶಕ್ತಿ, ಸಂಘಟನೆಯಿಂದ ಬಲಯುತರಾಗಬೇಕು ಎಂದು ಸಾರಿದ ಮಹಾನ್ ದಾರ್ಶನಿಕರು ಎಂದು ಹೇಳಿದರು.
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿದರು.ಮಂಡಲದ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುಧೀರ್ ಕೆ.ಎಸ್., ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ, ಒಬಿಸಿ ಮಂಡಲ ಪ್ರಭಾರಿ ಚಂದ್ರ ಜೋಗಿ, ಕಾರ್ಯದರ್ಶಿ ಸಂತೋಷ್ ಪೂಜಾರಿ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.







