ಹಿಂದುಳಿದ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಉಡುಪಿ ಜಿಲ್ಲಾ ಮಟ್ಟದ ಎಂಆರ್‌ಪಿ ತರಬೇತಿ ಕಾರ್ಯಾಗಾರ

ಉಡುಪಿ, ಸೆ.13: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉಡುಪಿ ಜಿಲ್ಲಾ ಮಟ್ಟದ ಎಂ.ಆರ್.ಪಿ ತರಬೇತಿ ಕಾರ್ಯಗಾರ ಇಂದು ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಗಾರವನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಉದ್ಘಾಟಿಸಿ ಮಾತನಾಡಿ,ಇದು ಜಾತಿಗಣತಿಯಲ್ಲ. ಕರ್ನಾಟಕದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆಯಾಗಿದೆ. ಸಮೀಕ್ಷೆಯನ್ನು ಯಶಸ್ವಿ ಗೊಳಿಸುವಲ್ಲಿ ತರಬೇತಿದಾರರ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಸ್ ಸರಿಯಾದ ತರಬೇತಿ ಪಡೆದು ಗಣತಿದಾರರಿಗೆ ಸರಿಯಾಗಿ ತರಬೇತಿ ನೀಡುವಂತೆ, ಆ ಮೂಲಕ ಸರಿಯಾದ ಹಾಗೂ ನಿಖರವಾದ ಮಾಹಿತಿಯನ್ನು ಸಮೀಕ್ಷೆಯಲ್ಲಿ ದಾಖಲಿಸಿ ಸಮೀಕ್ಷೆ ಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮೀಕ್ಷೆಯ ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳು, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.







