ಕೆಳಪರ್ಕಳ ರಸ್ತೆ ದುರಸ್ಥಿ: ವಾಹನಗಳ ಸಂಚಾರದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ
ಉಡುಪಿ, ಸೆ.13: ರಾಷ್ಟ್ರೀಯ ಹೆದ್ದಾರಿ-169ಎಯ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಪರ್ಕಳ ಭಾಗದಲ್ಲಿ (ಕೆಳಪರ್ಕಳದಲ್ಲಿ) ಭಾರಿ ಮಳೆ ಹಾಗೂ ಭಾರಿ ವಾಹನಗಳ ಓಡಾಟದಿಂದಾಗಿ ಅಲಲ್ಲಿ ಬಿರುಕುಗಳು/ರಸ್ತೆಕುಸಿತ ಉಂಟಾ ಗಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರ ಭಾರೀ ಒತ್ತಾಯದ ಹಿನ್ನೆಲೆಯಲ್ಲಿ ಈ ಭಾಗದ ದುರಸ್ಥಿಗೆ ಇದೀಗ ಮುಂದಾಗಿದ್ದು, ಒಂದು ವಾರ ಕಾಲ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಜಿಲ್ಲಾದಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಕಾಮಗಾರಿಗೆ ಸುಮಾರು 7 ದಿನಗಳ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಸ್ತೆಯ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾ ವಳಿಗಳ ಅನ್ವಯ ಸೆ.15ರಿಂದ 21ರವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಪರ್ಕಳ ಭಾಗದಲ್ಲಿ ಎಲ್ಲಾ ವಾಹನಗಳ ದ್ವಿಮುಖ ವಾಹನ ಸಂಚಾರವನ್ನು ನಿಷೇಧಿಸಿ, ಏಕಮುಖ ಸಂಚಾರಕ್ಕೆ ಅನುವು ಮಾಡಿ ಬದಲಿ ಮಾರ್ಗವನ್ನು ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶ ಹೊರಡಿಸಿದ್ದಾರೆ.
ಇದರಂತೆ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಉಡುಪಿ ಕಡೆಯಿಂದ ಶಿವಮೊಗ್ಗ - ಹೆಬ್ರಿ- ಕಾರ್ಕಳ ಕಡೆಗೆ ಹೋಗುವ ವಾಹನಗಳು, ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಮಣಿಪಾಲ ಈಶ್ವರನಗರ- ಸರಳೆಬೆಟ್ಟು- ಕೋಡಂಗಿ- ಪರ್ಕಳ ಮಾರ್ಕೆಟ್ ರಸ್ತೆ-ಪರ್ಕಳ ರಾಷ್ಟೀಯ ಹೆದ್ದಾರಿ 169 ಎರಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಶಿವಮೊಗ್ಗ - ಹೆಬ್ರಿ- ಕಾರ್ಕಳ ಕಡೆ ಯಿಂದ ಉಡುಪಿಗೆ ಹೋಗುವ ವಾಹನಗಳು ಹಾಲಿ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲೇ ಏಕಮುಕವಾಗಿ ಸಂಚರಿಸಬೇಕು. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







