ಕಾರ್ಮಿಕ ವರ್ಗದಿಂದ ರಾಜಕೀಯ ಹೋರಾಟ ಅಗತ್ಯ: ಕೆ.ಮಹಾಂತೇಶ್

ಕುಂದಾಪುರ, ಸೆ.14: ಕಾರ್ಮಿಕರು ಮತದಾನದ ಹಕ್ಕು ಪಡೆದರೂ ಕಾರ್ಮಿಕರ ಪರ ನೀತಿ ಮಾಡುವ ಹಕ್ಕು ಪಡೆದಿಲ್ಲ. ಆದುದರಿಂದ ಕಾರ್ಮಿಕ ವರ್ಗ ಕನಿಷ್ಠ ಕೂಲಿಗೆ, ಸೌಲಭ್ಯಗಳಿಗೆ ಹೋರಾಟ ಮಾಡಬೇಕಾಗಿದೆ. ಈಗಿನ ಜನಪ್ರತಿನಿಧಿಗಳು ಹಾಗೂ ಮಾಜಿ ಪ್ರತಿನಿಧಿಗಳು ಕೂಡ ಯಾವುದೇ ಹೋರಾಟ ಮಾಡದೇ ವೇತನ, ಭತ್ಯೆಗಳನ್ನು ಹೆಚ್ಚಳ ಮಾಡಿಸಿಕೊಳ್ಳುತ್ತಾರೆ. ಈ ಬಗ್ಗೆ ಕಾರ್ಮಿಕ ವರ್ಗ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದ್ದಾರೆ.
ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ದುಡಿಯುವ ವರ್ಗದ ಹಕ್ಕುಗಳ ರಕ್ಷಣೆಗಾಗಿ, ಜಿಲ್ಲೆಯಲ್ಲಿ ಸರಕಾರಿ ಸ್ವಾಮ್ಯದ ಕೈಗಾರಿಕೆಗಳು ಸ್ಥಾಪನೆಗಾಗಿ ರವಿವಾರ ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿನ ಕಾಂ.ದಾಸ ಭಂಡಾರಿ ವೇದಿಕೆ ಕಾಂ.ಸೂರ ದೇವಾಡಿಗ ಸಭಾಂಗಣದಲ್ಲಿ ಆಯೋಜಿಸಲಾದ ಸಿಐಟಿಯು 8ನೇ ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದಿನ ಬಿಜೆಪಿ ಸರಕಾರ ಕಾರ್ಮಿಕರನ್ನು 12 ಗಂಟೆ ದುಡಿಸುವ ನೀತಿ ತಂದಿದ್ದು ಈಗಿನ ಕಾಂಗ್ರೆಸ್ 12 ಗಂಟೆ ಕೆಲಸವನ್ನು ಮುಂದುವರಿಸಿತು. ಆದುದರಿಂದ ಬಿಜೆಪಿ ಸರಕಾರ ಕಾಂಗ್ರೆಸ್ ಸರಕಾರದ ಜನಪ್ರತಿನಿಧಿಗಳಾದ ಶತಕೋಟ್ಯಾಧಿಪತಿಗಳೇ ನೀತಿ ಮಾಡುವರಾಗಿರುವುದರಿಂದ ಜನವಿರೋಧಿ ನೀತಿಗಳು ಕಾರ್ಮಿಕ ವರ್ಗವನ್ನೂ ಹೈರಣಾಗಿಸಿದೆ ಎಂದು ಅವರು ದೂರಿದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಬಂದ ನಂತರ ಭಾರತೀಯ ಕಾರ್ಮಿಕ ಸಮ್ಮೇಳನ ನಡೆಸುವುದು ಕೈಬಿಟ್ಟಿದೆ. 1991ರಲ್ಲಿ ಕೆಳ ಹಂತದ ಆದಾಯ ಇರುವ ಶೇ.50ರಷ್ಟು ಜನರ ಒಟ್ಟು ಆದಾಯಕ್ಕಿಂತ ಶೇ.1 ರಷ್ಟು ಅತೀ ಶ್ರೀಮಂತರ ಆದಾಯ ಕಡಿಮೆ ಇತ್ತು. 2004ಕ್ಕೆ ಬರುವಾಗ ಶೇ.1 ಅತೀ ಶ್ರೀಮಂತರ ಆದಾಯ ಅತೀ ಕಡಿಮೆ ಆದಾಯವುಳ್ಳ ಶೇ.50ರಷ್ಟು ಜನರ ಒಟ್ಟು ಆದಾಯಕ್ಕಿಂತ ಅತೀ ಹೆಚ್ಚು ಆಗಿದೆ. ಇನ್ನೊಂದೆಡೆ ಕಾರ್ಮಿಕರ ನಿಜ ಆದಾಯ 2017-18ರಲ್ಲಿ ಮಾಸಿಕ 12665 ಇದ್ದದ್ದು 2023-24ರಲ್ಲಿ 11858 ಕ್ಕೆ ಇಳಿದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮೂರು ವರ್ಷಗಳ ವರದಿ ಮಂಡಿಸಿದರು. ಖಜಾಂಜಿ ಶಶಿಧರ ಗೊಲ್ಲ ಲೆಕ್ಕ ಪತ್ರ ಮಂಡಿಸಿದರು.







