ಉಡುಪಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮುದ್ದು ಕೃಷ್ಣ ವೇಷಧಾರಿಗಳ ಕಲರವ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ರವಿವಾರ ಮುದ್ದು ಕೃಷ್ಣ ಹಾಗೂ ವೇಷಧಾರಿಗಳು ವಿಶೇಷ ಆಕರ್ಷಣೆಯಾಗಿದ್ದವು. ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಮನಸೂರೆಗೊಂಡಿತು.
ಬೆಳಗ್ಗೆಯಿಂದ ಮಠದ ಪರಿಸರದಲ್ಲಿ ಮುದ್ದುಕೃಷ್ಣನ ವೇಷ ಭೂಷಣ ತೊಟ್ಟ ಮಕ್ಕಳ ನಲಿದಾಟ, ತುಂಟಾಟ ಕಂಡು ಬಂತು. ಗೀತಾಮಂದಿರದಲ್ಲಿ 1 ವರ್ಷದೊಳಗಿನ ಮಕ್ಕಳಿಗೆ ಬೆಣ್ಣೆಕೃಷ್ಣ ಸ್ಪರ್ಧೆ, ಮಧ್ವ ಮಂಟಪದಲ್ಲಿ 1 ರಿಂದ 3 ವರ್ಷ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ರಾಜಾಂಗಣದಲ್ಲಿ 3 ರಿಂದ 5 ವರ್ಷ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, ಅನಂತೇಶ್ವರ ದೇವಸ್ಥಾನದಲ್ಲಿ 5 ರಿಂದ 8 ವರ್ಷ ಮಕ್ಕಳಿಗೆ ಕಿಶೋರ ಕೃಷ್ಣ ಸ್ಪರ್ಧೆಗಳು ನಡೆದವು.
ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮದ ಜತೆ ನಗರದಲ್ಲಿ ವಿವಿಧ ವೇಷಧಾರಿಗಳು ಕಣ್ಮನ ಸೆಳೆದರು. ಶ್ರೀಕೃಷ್ಣಮಠ ರಥ ಬೀದಿ ಸೇರಿದಂತೆ ನಗರದಲ್ಲೆಡೆ ಬಾಲಕೃಷ್ಣ, ಯಕ್ಷ, ಹುಲಿವೇಷ ಸೇರಿದಂತೆ ನಾನಾಬಗೆಯ ವೇಷಧಾರಿಗಳು ತಿರುಗಾಟ ನಡೆಸುತ್ತಿದ್ದು, ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಕ್ಷಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಕ್ಕಿತು. ನಗರದೆಲ್ಲೆಡೆ ಸುಮಾರು 30ಕ್ಕೂ ಹೆಚ್ಚು ಹುಲಿ ವೇಷಧಾರಿಗಳ ತಂಡ ಜನರನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಹುಲಿವೇಷ ತಂಡಗಳು ವಿಶೇಷ ಗಮನ ಸೆಳೆದವು.
ರವಿವಾರ ಬೆಳಗ್ಗಿನಿಂದಲೇ ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಥಬೀದಿಯಲ್ಲಿಯೂ ಜನಜಂಗುಳಿ ಹೆಚ್ಚಾಗಿದ್ದು, ಅಷ್ಟಮಿ ಖರೀದಿ ಭರಾಟೆ ಜೋರಾ ಗಿತ್ತು. ಕೃಷ್ಣದೇವರಿಗೆ ಪುತ್ತಿಗೆ ಕಿರಿಯ ಮಠಾಧೀಶ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಬಂದ ಗೋವಿಂದ ವಿಶೇಷ ಅಲಂಕಾರ ಮಾಡಿದ್ದು, ಪರ್ಯಾಯ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
ಕೃಷ್ಣ ಮಠದ ಸುತ್ತಮುತ್ತ ವಿಶೇಷ ಹೂವಿನ ಅಲಂಕಾರ ನೆರವೇರಿಸ ಲಾಗಿದ್ದು, ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹಗುಡಿ ಮೊದಲಾದೆಡೆ ಸೇವಂತಿಗೆ, ಚೆಂಡು ಹೂ, ಕನಕಾಂಬರ, ತುಳಸಿ, ಅಬ್ಬಲ್ಲಿಗೆ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ.







