ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರದಲ್ಲಿ ಉಡುಪಿ; ವಿಟ್ಲಪಿಂಡಿಗೆ ಕ್ಷಣಗಣನೆ

ಉಡುಪಿ, ಸೆ.14: ಉಡುಪಿ ಶ್ರೀಕೃಷ್ಣ ಮಠದಲ್ಲಿ ರವಿವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿ ಸಲಾಗುತ್ತಿದೆ. ನಿರ್ಜಲ ಉಪವಾಸ ದಲ್ಲಿದ್ದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರೊಂದಿಗೆ ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ ನೆರವೇರಿಸಿದರು.
ರವಿವಾರ ನಡುರಾತ್ರಿ 12:11ಕ್ಕೆ ಪರ್ಯಾಯ ಸ್ವಾಮೀಜಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ಅನಂತರ ಉಳಿದ ಸ್ವಾಮೀಜಿಗಳು ಹಾಗೂ ಭಕ್ತರು ಸರದಿಯಂತೆ ಅರ್ಘ್ಯ ಪ್ರದಾನ ಮಾಡಲಿದ್ದಾರೆ.
ಬೆಳಗ್ಗೆಯಿಂದಲೇ ನಾಡಿನ ಎಲ್ಲಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಸೇರಿದಂತೆ ಮಠದ ಇಡೀ ಪರಿಸರದಲ್ಲಿ ಜನಜಾತ್ರೆ ಹಾಗೂ ವೇಷಧಾರಿಗಳಿಂದ ಹಬ್ಬದ ಸಂಭ್ರಮ ಕಂಡುಬಂತು.
ಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಇಂದು ಚಿಣ್ಣರು ಸೇರಿದಂತೆ ಪುಟ್ಟಪುಟ್ಟ ಮಕ್ಕಳಿಗಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆ ಗಳು ನಡೆದವು. ಹೀಗಾಗಿ ಇಡೀ ರಥಬೀದಿ ಆಸುಪಾಸಿನಲ್ಲಿ ಇಂದು ಎಲ್ಲಾ ಕಡೆಗಳ್ಲಿ ಮುದ್ದುಮುದ್ದು ಬಾಲಕೃಷ್ಣರೇ ಕಂಡುಬಂದರು.
ಈ ಬಾರಿಯ ಕೃಷ್ಣ ಜನ್ಮಾಷ್ಟಮಿ 48 ದಿನಗಳ ಮಂಡಲೋತ್ಸವವಾಗಿ ಆಚರಿಸಲ್ಪಡುತ್ತಿದೆ. ಇಂದು ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಭೋಜನ ಶಾಲೆಯಲ್ಲಿ ಪರ್ಯಾಯ ಪುತ್ತಿಗೆ ಯತಿದ್ವಯರು ರಾತ್ರಿ ಕೃಷ್ಣನಿಗೆ ಸಮರ್ಪಿಸುವ ಲಡ್ಡಿಗೆ ಮತ್ತು ಚಕ್ಕುಲಿ ತಯಾರಿಗೆ ಚಾಲನೆ ನೀಡಿದರು. ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಸಹಿತ ಇಡೀ ಕೃಷ್ಣ ಮಠಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಈ ಬಾರಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದಲ್ಲಿ ನಾಳೆ ಶ್ರೀಸುಗುಣೇಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ದ ಸಂಭ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಅನ್ನಬ್ರಹ್ಮದಲ್ಲಿ ಸಾವಿರಾರು ಮಂದಿ ಕೃಷ್ಣ ಪ್ರಸಾದವನ್ನು ಸ್ವೀಕರಿಸಲಿದ್ದಾರೆ.
ಅಪರಾಹ್ನ 3 ರಿಂದ ರಥಬೀದಿಯಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ. ಸ್ವರ್ಣ ರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಮೂರ್ತಿಗಳನ್ನಿರಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಥಬೀದಿ ಸುತ್ತಲೂ ನಿಲ್ಲಿಸಿದ ಗುರ್ಜಿಗಳಿಗೆ ನೇತು ಹಾಕಿದ ಮೊಸರು ಕುಡಿಕೆಯನ್ನು ಯಾದವ ವೇಷಧಾರಿಗಳಾದ ಗೋಪಾಲಕರು ಕೋಲಿನಿಂದ ಓಡೆಯುವ ಬಾಲಕೃಷ್ಣನ ಆಟ ನಡೆಯಲಿದೆ.
ಮೆರವಣಿಗೆಯ ವೇಳೆ ಪರ್ಯಾಯ ಸ್ವಾಮೀಜಿ ಸೇರಿದಂತೆ ಉಪಸ್ಥಿತ ರಿರುವ ಸ್ವಾಮೀಜಿಗಳು ಭಕ್ತರಿಗೆ, ಹಿಂದಿನ ರಾತ್ರಿ ಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸಿದ ಉಂಡೆ ಮತ್ತು ಚಕ್ಕುಲಿಯನ್ನು ವಿತರಿಸುವರು. ಭಕ್ತರಿಗೆ ಹಂಚಲು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಹತ್ತಾರು ಬಗೆಯ ಉಂಡೆ ಹಾಗೂ ಚಕ್ಕುಲಿಯನ್ನು ಸಿದ್ಧಪಡಿಸಲಾಗಿದೆ. ಮೆರವಣಿಗೆ ಕೊನೆಗೆ ಕಲಾವಿದ ಸೋಮನಾಥ ತಯಾರಿಸಿದ ಚಿನ್ನದ ಬಣ್ಣದ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ಥಂಭನ ಗೊಳಿಸಲಾಗುತ್ತದೆ.
ವಿವಿಧ ಸ್ಪರ್ಧೆಗಳು: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಹಲವು ಸ್ಪರ್ಧೆಗಳು ಇಂದು ನಗರದ ವಿವಿದೆಡೆಗಳಲ್ಲಿ ನಡೆದವು. ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮುದ್ದುಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ ಸ್ಪರ್ಧೆಗಳನ್ನು ಕ್ರಮವಾಗಿ ರಾಜಾಂಗಣ, ಪುತ್ತಿಗೆ ಮಠ, ಗೀತಾ ಮಂದಿರದಲ್ಲಿ ಆಯೋಜಿಸ ಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದರು.
ಇಂದು ಸಂಜೆ ಮಲ್ಪೆಯ ಕಡಲು ಕಿನಾರೆ, ಕುಂಜಿಬೆಟ್ಟು ಮೈದಾನ, ರಥಬೀದಿ ಮುಂತಾದ ಕಡೆಗಳಲ್ಲಿ ವಿವಿಧ ಸಂಘಟನೆಗಳಿಂದ ಹುಲಿ ವೇಷ ಕುಣಿತ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಪರ್ಯಾಯ ಮಠದಿಂದ ನಾಳೆ ಲೀಲೋತ್ಸವದ ಬಳಿಕ ಸಂಜೆ 4 ರಿಂದ ರಾಜಾಂಗಣ ದಲ್ಲಿ ಹುಲಿವೇಷ, ಜಾನಪದ ವೇಷ ಸೇರಿದಂತೆ ವಿವಿಧ ವೇಷಗಳ ಕುಣಿತದ ಸ್ಪರ್ಧೆ ನಡೆಯಲಿದೆ.
ಶ್ರೀಕೃಷ್ಣನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಶ್ರೀಕೃಷ್ಣ ಜನ್ಮಾ ಷ್ಟಮಿ, ವಿಟ್ಲಪಿಂಡಿ ಉತ್ಸವ ಹಿನ್ನೆಲೆಯಲ್ಲಿ ಇಂದು ರಥಬೀದಿ ಸುತ್ತಮುತ್ತ ಜನ ಜಾತ್ರೆಯೇ ನೆರೆದಿತ್ತು. ನಗರದ ಹಲವು ರಸ್ತೆಗಳಲ್ಲಿ ಜನ ಹಾಗೂ ವಾಹನಗಳ ಓಡಾಟ ಹೆಚ್ಚಿದ್ದು, ಹಲವು ಕಡೆ ಟ್ರಾಫಿಕ್ ಜಾಮ್‌ನ ಕಿರಿಕಿರಿಯನ್ನು ವಾಹನ ಚಾಲಕರು ಅನುಭವಿಸುವಂತಾಯಿತು.







